ಕ್ಯಾನ್ಸರ್ ರೋಗಿಗಳು ಸ್ವಯಂಪ್ರೇರಿತ ದಿಗ್ಬಂಧನಕ್ಕೆ ಒಳಗಾಗುವಂತೆ ಸಲಹೆ
ಬೆಂಗಳೂರು, ಎ.18: ಇಡೀ ದೇಶವೇ ಕೊರೋನ ಬೆಚ್ಚಿ ಬೀಳಿಸಿದೆ. ಇಂತಹ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವ ಜನರಿಗೆ ಬಹುಬೇಗ ವೈರಸ್ ಹರಡುವುದರಿಂದ ಕ್ಯಾನ್ಸರ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತವಾಗಿ ಮನೆಯಲ್ಲಿಯೇ ದಿಗ್ಬಂಧನ ವಿಧಿಸಿಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕ್ಯಾನ್ಸರ್ ರೋಗಿಗಳು, ಕಿಮೋಥೆರಪಿ, ರೇಡಿಯೇಷನ್ ಥೆರಪಿ ಪಡೆಯುತ್ತಿರುವವರಲ್ಲಿ ಸಹಜವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡರೆ ಅದನ್ನು ಗುಣಪಡಿಸುವುದರ ಜತೆಗೆ ಕ್ಯಾನ್ಸರ್ ಗೂ ಚಿಕಿತ್ಸೆ ಮುಂದುವರಿಸುವುದು ಬಹಳ ಸವಾಲಾಗುತ್ತದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತ ಕ್ವಾರಂಟೇನ್, ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳುವ ಮೂಲಕ ಸೋಂಕು ಕಾಡದಂತೆ ತಡೆಯಲು ಮುಂದಾಗಬೇಕು ಎಂದು ಕ್ಯಾನ್ಸರ್ ತಜ್ಞರು ಹೇಳಿದ್ದಾರೆ.
ಕ್ಯಾನ್ಸರ್ ಕಾಣಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲೇ ಸಾಮಾನ್ಯ ಸಂದರ್ಭದಲ್ಲಿ ನಿತ್ಯ 100 ಕ್ಕೂ ಹೆಚ್ಚು ಹೊಸ ರೋಗಿಗಳು ನೋಂದಣಿಯಾಗುತ್ತಿದ್ದರು. ಅಲ್ಲದೆ, ಕಿಮೋ ಅಥವಾ ರೇಡಿಯೇಷನ್ ಥೆರಫಿ ಚಿಕಿತ್ಸೆಯನ್ನೂ ಸಾಕಷ್ಟು ಮಂದಿ ಪಡೆಯುತ್ತಿದ್ದರು. ಸದ್ಯ ಸೋಂಕು ಭೀತಿ ಹಿನ್ನೆಲೆಯಲ್ಲಿ ಹೊಸ ರೋಗಿಗಳ ನೋಂದಣಿ, ಚಿಕಿತ್ಸೆಗೆ ಬರುವ ಹಳೆ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು: ಕೋವಿಡ್ 19 ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಕ್ಯಾನ್ಸರ್ ರೋಗಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಅಗತ್ಯವಿದ್ದರಷ್ಟೇ ಚಿಕಿತ್ಸೆ ಪಡೆಯಲು ಸಂಸ್ಥೆಗೆ ಭೇಟಿ ನೀಡಬೇಕು. ಅನಗತ್ಯವಾಗಿ ರೋಗಿಗಳು ಓಡಾಡಿದರೆ ಆಯಾಸವಾಗುವ ಜತೆಗೆ ಇತರೆ ಸೋಂಕುಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಹಾಗಾಗಿ, ಅನಗತ್ಯ ಓಡಾಟ ನಿಲ್ಲಿಸಬೇಕು ಎಂದು ಕಿದ್ವಾಯಿ ಸ್ಮಾರಕಗ್ರಂಥಿ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದ್ದಾರೆ.







