ಭಾರತದಲ್ಲಿ ಕೊರೋನ ವೈರಸ್ ಸೋಂಕಿತರು 15 ಸಾವಿರ ಮಂದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ 15 ಸಾವಿರದ ಗಡಿ ದಾಟಿದೆ ಹಾಗೂ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 500ನ್ನು ತಲುಪಿದೆ. ಶನಿವಾರ ಒಂದೇ ದಿನ ದೇಶದಲ್ಲಿ 1266 ಪ್ರಕರಣಗಳು ಬೆಳಕಿಗೆ ಬಂದಿವೆ.
ಮಹಾರಾಷ್ಟ್ರ, ಗುಜರಾತ್, ದೆಹಲಿ ಮತ್ತು ರಾಜಸ್ಥಾನಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದರೂ, ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವುದು ಸಮಾಧಾನಕರ ಅಂಶ. ಸೋಂಕಿತರ ಸಂಖ್ಯೆ ಇಮ್ಮಡಿಯಾಗಿ 15 ಸಾವಿರ ತಲುಪಲು ಎಂಟು ದಿನ ಆಗಿದೆ.
ದೆಹಲಿಯಲ್ಲಿ ಹೊಸದಾಗಿ ಪತ್ತೆಯಾಗಿರುವ 186 ಪ್ರಕರಣಗಳಲ್ಲಿ ಯಾವ ಪ್ರಕರಣವೂ ತಬ್ಲೀಗಿ ಸಮಾವೇಶದ ನಂಟು ಹೊಂದಿಲ್ಲ. ಮಹಾರಾಷ್ಟ್ರದಲ್ಲಿ ಒಂದೇ ದಿನ 328 ಪ್ರಕರಣಗಳು ಬೆಳಕಿಗೆ ಬಂದಿದ್ದು, ಗುಜರಾತ್ನಲ್ಲೂ ದಾಖಲೆಯ 280 ಪ್ರಕರಣಗಳು ಒಂದೇ ದಿನ ಪತ್ತೆಯಾಗಿವೆ. ಅಹ್ಮದಾದಾಬ್ ನಗರದಲ್ಲೇ 239 ಪ್ರಕರಣಗಳು ದೃಢಪಟ್ಟಿವೆ. ಇದು ಒಟ್ಟು ಪ್ರಕರಣಗಳ ಶೇಕಡ 85ರಷ್ಟು. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1376 ಆಗಿದೆ. 12 ಮಂದಿ ಒಂದೇ ದಿನ ಸೋಂಕಿನಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 53ಕ್ಕೇರಿದೆ. ಮಹಾರಾಷ್ಟ್ರದಲ್ಲಿ 11 ಸಾವಿನೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 3648ಕ್ಕೇರಿದೆ.
ಎರಡು ದಿನಗಳ ಹಿಂದೆ 361 ಪ್ರಕರಣಗಳು ಪತ್ತೆಯಾಗಿದ್ದ ಮಧ್ಯಪ್ರದೇಶದಲ್ಲಿ ಶನಿವಾರ 44 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಆಂಧ್ರದಲ್ಲಿ ಹೊಸದಾಗಿ 31 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 600ರ ಗಡಿದಾಟಿದೆ. ಕೇರಳದಲ್ಲಿ ಕೇವಲ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.





