ಮನೆಬಾಗಿಲಿಗೆ ಬಂದ ಬ್ಯಾಂಕ್ !
ಮಂಗಳೂರು : ಕ್ಯಾಶ್ ಕೌಂಟರಿನ ಹುಡುಗಿಯರ ಮುಖದಲ್ಲಿ ನಗು ಹುಡುಕಿದರೂ ಸಿಗದು. ಅದಕ್ಕೇ ಇರಬೇಕು ಹಾಕಿದ್ದಾರೆ ಬೋರ್ಡು “ನಗದು”!! ಎಂದು ಹನಿಗವಿ ಡುಂಡಿರಾಜ್ ಬ್ಯಾಂಕಲ್ಲಿರುವಾಗಲೇ ಹೇಳಿದ್ದರು ! ಕ್ಯಾಶಿಯರ್ ಹಾಗಿರಲಿ, ಮ್ಯಾನೇಜರ್ ಮುಖದಲ್ಲಿಯೂ ಪಸೆಯೇ ಇಲ್ಲ ಎಂದು ದೂರುವವರೂ ಇದ್ದಾರೆ.
ಇತ್ತೀಚೆಗಂತೂ ಬ್ಯಾಂಕಿನಲ್ಲಿ ಯಾವ ಕೆಲಸವನ್ನು ಮೊದಲಿನಷ್ಟು ಸಲೀಸಾಗಿ ಮಾಡಿಸಿಕೊಳ್ಳಲು ಆಗುತ್ತಿಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗಿದೆ. ಈ ನಡುವೆ ಕೊರೋನ ವೈರಸ್ ಕಾರಣದಿಂದ ಬ್ಯಾಂಕ್ ವ್ಯವಹಾರ ಇನ್ನಷ್ಟು ಬಿಗಿಯಾಗಿರುವ ವಿಷಮಗಳಿಗೆಯಲ್ಲಿ ರಾಷ್ಟ್ರೀಕೃತ ಬ್ಯಾಂಕೊಂದರ ಸಿಬ್ಬಂದಿ ಮಾನವೀಯತೆ ಮೆರೆದು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆದದ್ದು ಇಷ್ಟು : ಮಂಗಳೂರಿನ ಹಂಪನಕಟ್ಟಾ ಕೆನರಾ ಬ್ಯಾಂಕಿನ ಗ್ರಾಹಕಿಯಾಗಿರುವ 102 ವರ್ಷ ವಯಸ್ಸಿನ ಮಹಿಳೆಯೊಬ್ಬರ ಪೆನ್ಷನ್ ಹಣ ಅವರ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿತ್ತು. ಆದರೆ ಅನಾರೋಗ್ಯ ಮತ್ತು ಲಾಕ್ ಡೌನ್ ನಿರ್ಬಂಧದಿಂದಾಗಿ ಬ್ಯಾಂಕ್ ಸಂದರ್ಶನ ಅಸಾಧ್ಯವಾಗಿತ್ತು.
ಅವಶ್ಯಕತೆಯನ್ನು ಅರಿತು, ಗ್ರಾಹಕಿಯ ಕೋರಿಕೆ ಮೇರೆಗೆ ಬ್ಯಾಂಕಿನ ಅಧಿಕಾರಿ ಪುಷ್ಪರಾಜ ಹೆಗ್ಡೆ ಇತರ ಸಿಬ್ಬಂದಿಗಳ ಜತೆಯಲ್ಲಿ ಗ್ರಾಹಕರ ಮನೆಯನ್ನು ಸಂದರ್ಶಿಸಿ ಪೆನ್ಷನ್ ಮೊತ್ತವನ್ನು ಪಾವತಿಸಿದರು. ಬ್ಯಾಂಕ್ ಸಿಬ್ಬಂದಿಯ ಸ್ಪಂದನಶೀಲತೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.