ಲಾಕ್ ಡೌನ್ ನಲ್ಲಿ ಸಹಾಯ ಹಸ್ತ ಚಾಚುತ್ತಿರುವ ಮಸೀದಿ ಕಮಿಟಿಗಳು: ಎಐಎಂಡಿಸಿ ಶ್ಲಾಘನೆ
ಮಂಗಳೂರು : ಕೊರೋನ ವೈರಸ್ ಭೀತಿಯಿಂದ ಭಾರತಲ್ಲಿ ಲಾಕ್ ಡೌನ್ ನಿಂದ ಜನತೆ ಮನೆಯೊಳಗೆ ಇರುವಂತಾಗಿದ್ದು, ಈ ಸಂದರ್ಭದಲ್ಲಿ ದ.ಕ ಜಿಲ್ಲೆಯ ಅನೇಕ ಮಸೀದಿ ಕಮಿಟಿಗಳು ತಮ್ಮ ಜಮಾಅತರಿಗೆ ಹಾಗೂ ಸರ್ವ ಧರ್ಮೀಯರಿಗೆ ರೇಷನ್ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿರುವುದು ನಿಜಕ್ಕೂ ಅಭಿನಂದನಾರ್ಹವಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಕೌನ್ಸಿಲ್ ಮಸ್ಜಿದ್ ಒನ್ ಮೂವ್ಮೆಂಟ್ (ಎಐಎಂಡಿಸಿ) ತಿಳಿಸಿದೆ.
ದ.ಕ ಜಿಲ್ಲೆಯ ಖಾಝಿ ಅವರು ಈಗಾಗಲೇ ಎಲ್ಲಾ ಜಮಾಅತ್ ಕಮಿಟಿಗಳು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಿರುತ್ತಾರೆ. ಮಸೀದಿಗಳು ಆರಾಧನೆಯೊಂದಿಗೆ ಇಂತಹಾ ಕಾರುಣ್ಯ ಸೇವೆಗಳನ್ನು ನಡೆಸುವ ಕೇಂದ್ರಗಳಾಗಿರುತ್ತವೆ. ಇದನ್ನೇ ಪ್ರವಾದಿ ಮುಹಮ್ಮದ್ (ಸ.ಅ) ರವರು ಮದೀನಾ ಮಸೀದಿಯಲ್ಲಿ ಪ್ರಾಯೋಗಿಕವಾಗಿ ತೋರಿಸಿ ಕೊಟ್ಟಿದ್ದಾರೆ. ಲಾಕ್ ಡೌನ್ ಅವಧಿ ವಿಸ್ತರಿಸಿದ ಕಾರಣ ಪವಿತ್ರ ರಮಝಾನ್ ತಿಂಗಳಲ್ಲಿ ಇನ್ನಷ್ಟು ಕಷ್ಟಪಡಬೇಕಾಗಬಹುದು. ಜನರು ಇನ್ನಷ್ಟು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಆದುದರಿಂದ ದ.ಕ ಜಿಲ್ಲೆಯ ಎಲ್ಲಾ ಜಮಾಅತ್ ಕಮಿಟಿಗಳು ತಮ್ಮ ಸೇವಾ ಕಾರ್ಯಗಳನ್ನು ಇನ್ನಷ್ಟು ವಿಸ್ತರಿಸುವಂತೆ ಹಾಗೂ ಎಲ್ಲಾ ಧಾನಿಗಳು, ಆರ್ಥಿಕ ಸ್ಥಿತಿವಂತರು ಈ ಪುಣ್ಯ ಕಾರ್ಯದಲ್ಲಿ ಜಮಾಅತ್ ಕಮಿಟಿಯವರೊಂದಿಗೆ ಕೈ ಜೋಡಿಸುವಂತೆ, ಎಲ್ಲಾ ಮಸೀದಿ ಕಮಿಟಿಗಳು ಹಾಗೂ ಸಂಘ-ಸಂಸ್ಥೆಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಅರ್ಹರಿಗೆ ತಲುಪಿಸಿ ಕೊಡುವ ನಿಟ್ಟಿನಲ್ಲಿ ಗಮನವಹಿಸುವಂತೆ 'ಎಐಎಂಡಿಸಿ' ದ.ಕ. ಜಿಲ್ಲಾ ಅಧ್ಯಕ್ಷ ಹಾಜಿ ಅಹ್ಮದ್ ಮುಹಿಯುದ್ದೀನ್ ವರ್ಲ್ಡ್ ವೈಡ್ , ಪ್ರಧಾನ ಕಾರ್ಯದರ್ಶಿ ನೂರ್ ಯೆನ್ ಮಾರ್ಕ್ ಹಾಗು ಕಾರ್ಯದರ್ಶಿ ರಫೀಕ್ ಮಾಸ್ಟರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





