ರಮಝಾನ್ ತಿಂಗಳ ಹಿನ್ನೆಲೆಯಲ್ಲಿ ಮಾರ್ಗಸೂಚಿ ಬಿಡುಗಡೆ: ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು?
ಕೊರೋನ ವೈರಸ್ ಭೀತಿ

ಹೊಸದಿಲ್ಲಿ: ರಮಝಾನ್ ತಿಂಗಳು ಈ ವಾರ ಆರಂಭವಾಗುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಓ) ಮಧ್ಯಂತರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇಡೀ ವಿಶ್ವದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿರುವ ಹಿನ್ನೆಲೆಯಲ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪವಿತ್ರ ಮಾಸವನ್ನು ಆಚರಿಸುವಂತೆ ಸಲಹೆ ಮಾಡಿದೆ.
ಸಾಮಾನ್ಯವಾಗಿ ಈ ಒಂದು ತಿಂಗಳ ಅವಧಿಯಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬಹಳಷ್ಟು ದೇಶಗಳಲ್ಲಿ ರಾತ್ರಿಯ ವೇಳೆ ಕೂಡಾ ಆಹಾರ ಮಾರಾಟದ ವ್ಯವಸ್ಥೆ ಇರುತ್ತದೆ ಹಾಗೂ ಎಲ್ಲ ಧರ್ಮೀಯರೂ ಇಂಥ ಮಾರುಕಟ್ಟೆಗಳಿಗೆ ಭೇಟಿ ನೀಡುತ್ತಾರೆ. ಉಪವಾಸದ ತಿಂಗಳುದ್ದಕ್ಕೂ ಮಸೀದಿಗಳಲ್ಲಿ ಮುಸ್ಲಿಮರು ತರಾವೀಹ್ ಗಾಗಿ ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ಆದರೆ ಈ ವರ್ಷ ದೈಹಿಕವಾಗಿ ಅಂತರವನ್ನು ಕಾಪಾಡಬೇಕು ಮತ್ತು ಸಾಮಾಜಿಕ ಸಮಾವೇಶಗಳನ್ನು ಆಯೋಜಿಸಬಾರದು ಎಂದು ಡಬ್ಲ್ಯುಎಚ್ ಒ ಸಲಹೆ ನೀಡಿದೆ. ಈಗಾಗಲೇ 23 ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಸೋಂಕು ತಗುಲಿದ್ದು, 1.60 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ಮತ್ತಷ್ಟು ಹರಡದಂತೆ ತಡೆಯಲು ಸಮಾವೇಶಗಳನ್ನು ನಡೆಸಬಾರದು. ಅಸ್ವಸ್ಥರು ಇತರರನ್ನು ಸಂಪರ್ಕಿಸದಿರುವುದು ಒಳ್ಳೆಯದು ಎಂದು ಸಲಹೆ ಮಾಡಿದೆ. ಅಂತೆಯೇ ಅಸ್ವಸ್ಥರು ಉಪವಾಸ ಕೈಗೊಳ್ಳದಂತೆ, ಧೂಮಪಾನ ಮಾಡದಂತೆ ಸಲಹೆ ಮಾಡಿದೆ.





