ಹಣ ಬಳಸಿ ಕೆನಡಾದ ರಾಜಕಾರಣಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದ ಭಾರತದ ‘ರಾ’: globalnews.ca ವರದಿ

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
ಹೊಸದಿಲ್ಲಿ: ಭಾರತ ಸರ್ಕಾರದ ಹಿತಾಸಕ್ತಿಯನ್ನು ಬೆಂಬಲಿಸುವಂತೆ ಕೆನಡಾದ ರಾಜಕಾರಣಿಗಳ ಮೇಲೆ ಹಣ ಮತ್ತು ತಪ್ಪು ಮಾಹಿತಿ ಬಳಸಿ ಪ್ರಭಾವ ಬೀರಲು ಭಾರತದ ಗುಪ್ತಚರ ಸಂಸ್ಥೆ ‘ರಾ’ ಪ್ರಯತ್ನ ನಡೆಸಿತ್ತು ಎಂದು ಕೆನಡಾದ ವೆಬ್ ಸೈಟ್ globalnews.ca ಆರೋಪಿಸಿದೆ.
‘ಎ.ಬಿ.’ ಎಂಬ ಭಾರತೀಯ ಪ್ರಜೆಯೊಬ್ಬರ ಮೂಲಕ ಈ ಪ್ರಯತ್ನ ನಡೆದಿತ್ತು. ಅವರು ಭಾರತೀಯ ಪತ್ರಿಕೆಯೊಂದರ ಪ್ರಧಾನ ಸಂಪಾದಕ. ಇವರನ್ನು ಬೇಹುಗಾರಿಕೆಗೆ ಬಳಸಿಕೊಂಡು, ಭಾರತ ಸರ್ಕಾರದ ಹಿತಾಸಕ್ತಿಯನ್ನು ಬೆಂಬಲಿಸುವಂತೆ ಕೆನಡಾ ರಾಜಕಾರಣಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನ ನಡೆಸಿತ್ತು ಎಂದು globalnews.ca ಆರೋಪಿಸಿದೆ.
ಇಂತಹ ಗಂಭೀರ ಆರೋಪಗಳ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ, ಗುಪ್ತಚರ ವಿಭಾಗ ಅಥವಾ ‘ರಾ’ ಸಂಸ್ಥೆಯನ್ನು ಸಂಪರ್ಕಿಸಿದಾಗ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು Theprint.in ವರದಿ ಮಾಡಿದೆ.
ಭಾರತೀಯ ಗುಪ್ತಚರ ವಿಭಾಗದ ವಿದೇಶಿ ಪ್ರಭಾವ ಕಾರ್ಯಾಚರಣೆಗೆ ಪೂರಕ ಎನ್ನಲಾದ ದಾಖಲೆಯನ್ನೂ globalnews.ca ಪ್ರಕಟಿಸಿದೆ. ಈ ಸಂಪಾದಕ ಭಾರತೀಯ ಗುಪ್ತಚರ ವಿಭಾಗದ ಅಧಿಕಾರಿಗಳನ್ನು ಆರು ವರ್ಷಗಳಲ್ಲಿ 25ಕ್ಕೂ ಹೆಚ್ಚು ಬಾರಿ ಭೇಟಿಯಾಗಿದ್ದರು ಎಂದು ಅದು ಹೇಳಿದೆ. ಪಾಕಿಸ್ತಾನ ಭಯೋತ್ಪಾದನೆಯನ್ನು ತಡೆಗಟ್ಟಲು ವಿಫಲವಾಗಿರುವುದನ್ನು ಉಲ್ಲೇಖಿಸಿ, ಈ ವಿಚಾರದಲ್ಲಿ ಕೆನಡಾದ ಬೆಂಬಲ ಪಡೆಯುವಂತೆಯೂ ಪ್ರಯತ್ನ ನಡೆದಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.







