‘ಮಾಸ್ಕ್’ ತಯಾರಿಗೆ ಹತ್ತಿ ಬಟ್ಟೆಯ ಕೊರತೆ

ಮಂಗಳೂರು, ಎ.19: ಹೊರಗಡೆ ಹೋಗುವಾಗ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮತ್ತು ಪೊಲೀಸ್ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕಠಿಣ ಕ್ರಮ ಜರುಗಿಸುತ್ತಿರುವುದರಿಂದ ಆತಂಕಿತರು ಇದೀಗ ಮಾಸ್ಕ್‌ನ ಮೊಗೆ ಹೋಗಿದ್ದಾರೆ. ಇದರಿಂದ ಮಾಸ್ಕ್‌ಗೆ ಅದರಲ್ಲೂ ‘ಹೋಂ ಮೇಡ್’ ಮಾಸ್ಕ್‌ಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಸರ್ಜಿಕಲ್ ಮಾಸ್ಕ್ ಬದಲು ಶುದ್ಧ ಹತ್ತಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ನ್ನು ಬಳಸಿಕೊಳ್ಳಿ ಎಂದು ವೈದ್ಯರು ಕೂಡ ಸಲಹೆ ನೀಡಿದ ಕಾರಣ ಎಲ್ಲರೂ ಮನೆಯಲ್ಲೇ ತಯಾರಿಸುವ ಮಾಸ್ಕ್ ಪಡೆಯಲು ಹಾತೊರೆಯುತ್ತಿದ್ದಾರೆ. ಆದರೆ ತಕ್ಷಣಕ್ಕೆ ಮಾಸ್ಕ್ ಹೊಲಿದು ಪೂರೈಕೆ ಮಾಡಲು ಹತ್ತಿ ಬಟ್ಟೆ ಕೊರತೆ ಎದುರಾಗಿದೆ.
'ಮಾಸ್ಕ್ ಇಂಡಿಯಾ’ ಪರಿಕಲ್ಪನೆಡಿಯಲ್ಲಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವೃತ್ತಿನಿರತ ದರ್ಜಿಗಳು ಹತ್ತಿಬಟ್ಟೆಯ ಮಾಸ್ಕ್ ಹೊಲಿದು ಕೊಡಲು ಮುಂದೆ ಬಂದಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಅನೇಕ ಮಂದಿ ಮಾಸ್ಕ್ ಹೊಲಿದು ಕೊಡುವ ಕಾಯಕಕ್ಕೆ ಇಳಿದಿ ದ್ದಾರೆ. ಕೆಲವರು ಉಚಿತವಾಗಿ ಸೇವೆ ಮಾಡಿದರೆ, ಇನ್ನು ಕೆಲವರು ವ್ಯಾಪಾರದ ಉದ್ದೇಶದಿಂದ ಮಾಸ್ಕ್ ತಯಾರಿಸುತ್ತಿದ್ದಾರೆ. ಆದರೆ ಮನೆಯಲ್ಲೇ ತಯಾರಿಸುವ ಮಾಸ್ಕ್‌ಗೆ ಹತ್ತಿ ಬಟ್ಟೆ ಬೇಕಾಗುತ್ತದೆ. ಟೈಲರ್‌ಗಳು ತಮ್ಮಲ್ಲಿ ಸ್ಟಾಕ್ ಇದ್ದ ಒಂದಷ್ಟು ಹತ್ತಿ ಬಟ್ಟೆಗಳಿಂದ ಮಾಸ್ಕ್ ರೆಡಿ ಮಾಡಿ ಹಂಚಿದ್ದಾರೆ. ಆದರೆ ಈಗ ಅನೇಕರಿಗೆ ಹತ್ತಿ ಬಟ್ಟೆ ಲಭ್ಯವಿಲ್ಲದ ಕಾರಣ ಮಾಸ್ಕ್ ಇಂಡಿಯಾ ಪರಿಕಲ್ಪನೆಗೆ ತೊಡಕಾಗಿದೆ.
ಮೆಡಿಕಲ್‌ನಲ್ಲಿ ದೊರೆಯುವ ಸರ್ಜಿಕಲ್ ಮಾಸ್ಕ್ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಮಾತ್ರ ಬಳಸುವಂತದ್ದು. ಅದನ್ನು ಸಾಮಾನ್ಯರು ಬಳಸಬಾರದು. ಈ ಮಾಸ್ಕ್ ಬಳಸಿ ಮನೆಯಲ್ಲಿ ತೆಗೆದಿಟ್ಟರೆ ಮಕ್ಕಳ ಸಹಿತಇತರರಿಗೆ ವೈರಾಣು ಹರಡುವ ಅಪಾಯ ಇದೆ. ಅಲ್ಲದೆ ಈ ಮಾಸ್ಕ್‌ನ್ನು ಕೇವಲ ಆರು ಗಂಟೆ ಮಾತ್ರ ಬಳಕೆ ಮಾಡಬಹುದು. ಆದ್ದರಿಂದ ಎಲ್ಲರೂ ಮನೆಯಲ್ಲೇ ಹತ್ತಿಬಟ್ಟೆಯಿಂದ ಮರು ಬಳಕೆ ಮಾಡುವಂತಹ ಮಾಸ್ಕ್ ತಯಾರಿಸಿ ಬಳಸಬೇಕು ಎಂದು ಪ್ರಸಿದ್ಧ ಹೃದ್ರೋಗ ತಜ್ಞ ಡಾ. ದೇವಿ ಶೆಟ್ಟಿ ಸಲಹೆ ನೀಡಿದ್ದರು.
ಅದರಂತೆ ಅನೇಕ ಮಂದಿ ಮನೆಯಲ್ಲೇ ಮಾಸ್ಕ್ ತಯಾರಿಕೆಗೆ ಮುಂದಾಗಿದ್ದಾರೆ. ಲಾಕ್‌ಡೌನ್ ಬಳಿಕ ಬಟ್ಟೆ ಅಂಗಡಿಗಳ ವ್ಯಾಪಾರಕ್ಕೆ ಅವಕಾಶ ಇಲ್ಲದ ಕಾರಣ ಮಾಸ್ಕ್ ತಯಾರಿಕೆಗೆ ಹಿನ್ನಡೆಯಾಗಿದೆ. ಮಾಸ್ಕ್ ಹೊಲಿದು ಕೊಡುವವರಿಗೆ ಹತ್ತಿ ಬಟ್ಟೆಯನ್ನು ಪೂರೈಸಿದರೆ ಸಾವಿರಾರು ಮಾಸ್ಕ್ ಶೀಘ್ರ ಸಿದ್ಧವಾಗಲಿದೆ. ಇಲ್ಲದಿದ್ದರೆ ಜನಸಾಮಾನ್ಯರು ಮೆಡಿಕಲ್‌ನಲ್ಲಿ ಸಿಗುವ ಸರ್ಜಿಕಲ್ ಮಾಸ್ಕ್‌ಗೇ ಮೊರೆ ಹೋಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸಾಮಾನ್ಯ ಆರೋಗ್ಯವಂತರು ಮಾಸ್ಕ್ ಧರಿಸುವ ಅಗತ್ಯ ಇಲ್ಲ ಎಂದು ಹೇಳುತ್ತಿದ್ದ ಸರಕಾರವೇ ಈಗ ಎಲ್ಲರೂ ಹೊರಗಡೆ ಹೋಗುವಾಗ ಕಡ್ಡಾಯ ಮಾಸ್ಕ್ ಧರಿಸಿ ಎಂದು ಸೂಚನೆ ನೀಡಿದ ಕಾರಣ ಮನೆಯಲ್ಲೇ ತಯಾರಿಸುವ ಮತ್ತು ಮರುಬಳಕೆಯ ಹತ್ತಿಬಟ್ಟೆಯ ಮಾಸ್ಕ್‌ಗೆ ಬೇಡಿಕೆ ಬಂದಿದೆ.
ಬಟ್ಟೆ ಮಾಸ್ಕ್‌ಗೆ ಬೇಡಿಕೆ ಇದೆ. ನಾವು ಸ್ತ್ರೀ ಶಕ್ತಿ ಸಂಘಟನೆ ಮೂಲಕ ಮಾಸ್ಕ್ ಹೊಲಿಯುವ ಕೆಲಸಕ್ಕೆ ಮುಂದಾಗಿದ್ದೇವೆ. ಆದರೆ ಬಟ್ಟೆ ಅಂಗಡಿಗಳು ತೆರೆಯದ ಕಾರಣ ನಮಗೆ ಸಕಾಲಕ್ಕೆ ಹತ್ತಿ ಬಟ್ಟೆ ಸಿಗುತ್ತಿಲ್ಲ. ಇದರಿಂದ ಬೇಡಿಕೆಗೆ ತಕ್ಕಂತೆ ಮಾಸ್ಕ್ ಹೊಲಿದು ಕೊಡಲು ಸಾಧ್ಯವಾಗುತ್ತಿಲ್ಲ.
- ಸುಲೋಚನಾ, ಅಧ್ಯಕ್ಷೆ
ಸುಭಾಶಿತ ಮಹಿಳಾ ಮಂಡಳಿ ಕಂದಾವರ







