ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸರಕಾರಿ ದರದಲ್ಲಿ ಚಿಕಿತ್ಸೆ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಎ.19: ನಗರದಲ್ಲಿರುವ ವೆನ್ಲಾಕ್ ಆಸ್ಪತ್ರೆಯನ್ನು ಕೊರೋನ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾದ ಹಿನ್ನೆಲೆಯಲ್ಲಿ ಈಗಾಗಲೆ ಸಾಮಾನ್ಯವಾಗಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದ ಒಳ ಹಾಗೂ ಹೊರ ರೋಗಿಗಳಿಗೆ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿರುವ ದರ ಅಥವಾ ವೆನ್ಲಾಕ್‌ನಲ್ಲಿ ಚಿಕಿತ್ಸೆ ನೀಡುತ್ತಿರುವ ದರದಲ್ಲಿಯೇ ಚಿಕಿತ್ಸೆ ನೀಡಲು ಖಾಸಗಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಚಿಕಿತ್ಸೆ
ಬಿಜೈ, ಎಕ್ಕೂರು, ಕೂಳೂರು, ಜೆಪ್ಪು, ಸುರತ್ಕಲ್, ಕುಳಾಯಿ, ಪಡೀಲ್, ಶಕ್ತಿನಗರ, ಬೆಂಗರೆ ಹಾಗೂ ಬಂದರ್‌ನಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಚಿಕಿತ್ಸೆ ನೀಡಲಾಗುತ್ತಿದೆ. ಎಂಎಲ್‌ಸಿ (ಮೆಡಿಕೋ ಲೀಗಲ್ ಕೇಸ್) ಅಥವಾ ಪೊಲೀಸ್ ಕೇಸ್‌ಗೆ ಸಂಬಂಧಿಸಿದ ರೋಗಿಗಳಿದ್ದರೆ ಖಾಸಗಿ ವೈದ್ಯಕೀಯ ಕಾಲೇಜು ಅಥವಾ ನಗರ ಪ್ರಾಥಮಿಕ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಬಹುದು.
ಉಚಿತ ಡಯಾಲಿಸಿಸ್
ಡಯಾಲಿಸಿಸ್ ರೋಗಿಗಳಿಗೆ ಸರಕಾರದ ಮನವಿಯಂತೆ ಕೆಲವು ಖಾಸಗಿ ಆಸ್ಪತ್ರೆಗಳು ಈಗಾಗಲೇ ಉಚಿತವಾಗಿ ಡಯಾಲಿಸಿಸ್ ಮಾಡಲು ಒಪ್ಪಿಕೊಂಡಿವೆ. ಆ ಆಸ್ಪತ್ರೆಗಳಿಗೆ ಡಯಾಲಿಸಿಸ್ ರೋಗಿಗಳ ಪಟ್ಟಿ ನೀಡಲಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸಂಬಂಧಪಟ್ಟಂತೆ ಸರಕಾರಿ ಆಸ್ಪತ್ರೆಯ ರೆಫರಲ್ ಕಾರ್ಡ್ ಇಲ್ಲದೆಯೇ ಸೇವೆ ಪಡೆಯಬಹುದು ಎಂದು ಸರಕಾರ ನಿರ್ದೇಶನ ನೀಡಿದೆ. ಅದರಂತೆ ಚಿಕಿತ್ಸೆ ಪಡೆಯಬಹುದು. ಶವಪರೀಕ್ಷೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವೆನ್ಲಾಕ್‌ನಲ್ಲಿ ಅಗತ್ಯ ಕ್ರಮ
ಕೊರೋನ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿರುವ ವೆನ್ಲಾಕ್ ಆಸ್ಪತ್ರೆ 400 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ. ಕೊರೋನ ಶಂಕಿತ ಹಾಗೂ ಸೋಂಕು ದೃಢಪಟ್ಟಿರುವ ರೋಗಿಗಳಿಗೆ ಪ್ರತ್ಯೇಕ ವಿಶೇಷ ವಾರ್ಡ್‌ಗಳನ್ನು ಸಿದ್ಧಗೊಳಿಸಲಾಗಿದೆ. ಇಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡದಂತೆ ಎಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರಕಾರ ನಿಗದಿಪಡಿಸಿರುವ ವೈದ್ಯಕೀಯ ಶಿಷ್ಟಾಚಾರಗಳನ್ನು ಪಾಲಿಸಲಾಗುತ್ತಿದೆ.
ಹೆರಿಗೆಗೆ ವಿಶೇಷ ವಾರ್ಡ್
ವೆನ್ಲಾಕ್ ಆಸ್ಪತ್ರೆಯ ಆವರಣದ ಹೊಸ ಕಟ್ಟಡದ ಮುಂಭಾಗದಲ್ಲಿ ರೋಗಿಗಳಿಗೆ ತಪಾಸಣೆ ನಡೆಸಲಾಗುತ್ತದೆ. ಕೊರೋನ ಶಂಕಿತರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಅನಂತರ ವರದಿ ನೆಗೆಟಿವ್ ಬಂದರೆ ಬಿಡುಗಡೆಗೊಳಿಸಲಾಗುತ್ತದೆ. ಸೋಂಕು ದೃಢಪಟ್ಟರೆ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೊರೋನ ಪಾಸಿಟಿವ್ ಬಂದಿರುವ ರೋಗಿಗಳಿಗೆ ಇತರೆ ಶಸ್ತ್ರಚಿಕಿತ್ಸೆ ಅಥವಾ ಹೆರಿಗೆಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿಯೇ ನಡೆಸಲಾಗುತ್ತದೆ. ಇಂತಹ ರೋಗಿಗಳಿಗೆ ವಿಶೇಷ ವಾರ್ಡ್ ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







