ಮೂಡುಬಿದಿರೆಯಲ್ಲಿ ‘ಸೌಹಾರ್ದ ಫೋರಂ’ ವತಿಯಿಂದ ‘ಫುಡ್ ಸ್ಟ್ಯಾಂಡ್ ’ ಅಳವಡಿಕೆ
► ಹಸಿವು ನೀಗಿಸಲು ಹೀಗೊಂದು ವಿಶಿಷ್ಟ ವ್ಯವಸ್ಥೆ ► ಆಸಕ್ತರು ತಂದಿಡಬಹುದು ► ಹಸಿದವರು ತಿಂದು ಹೋಗಬಹುದು

ಮಂಗಳೂರು, ಎ.19: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್‌ನಿಂದ ನಾನಾ ರೀತಿಯಲ್ಲಿ ಸಮಸ್ಯೆಗೆ ಸಿಲುಕಿದ, ಆಹಾರವಿಲ್ಲದೆ ಹಸಿದ, ಕೆಲಸವಿಲ್ಲದೆ ನೊಂದ, ಆರ್ಥಿಕವಾಗಿ ಹಿಂದುಳಿದ ಮತ್ತು ಮಧ್ಯಮ ವರ್ಗದವರು, ನಿರಾಶ್ರಿತರು, ಭಿಕ್ಷುಕರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹೀಗೆ ನಾನಾ ಸ್ಥರದ ಜನರಿಗೆ ಸರಕಾರವಲ್ಲದೆ ನಾಡಿನ ಮೂಲೆ ಮೂಲೆಯ ಸಂಘ ಸಂಸ್ಥೆಗಳು, ದಾನಿಗಳು ದಿನಸಿ ಸಾಮಗ್ರಿಯ ಕಿಟ್ ವಿತರಿಸಿಯೋ, ಆಹಾರ ನೀಡಿಯೋ, ರೋಗಿಗಳಿಗೆ ವೈದ್ಯಕೀಯ ಸಹಾಯ-ರಕ್ತದಾನ ಮಾಡಿಯೋ ಒಂದಲ್ಲೊಂದು ರೀತಿಯಲ್ಲಿ ನೆರವು ನೀಡುತ್ತಿರುವ ಮಧ್ಯೆಯೇ ಮೂಡುಬಿದಿರೆಯ ‘ಸೌಹಾರ್ದ ಫೋರಂ’ ಎಂಬ ಸಂಸ್ಥೆಯು ಕಳೆದ ಒಂದು ವಾರದಿಂದ ವಿಶಿಷ್ಟ ರೀತಿಯ ಸೇವೆಯ ಮೂಲಕ ಗಮನ ಸೆಳೆಯುತ್ತಿದೆ.
ಮೂಡುಬಿದಿರೆ ಜಂಕ್ಷನ್‌ನ ಕೃಷ್ಣ ಕಟ್ಟೆಯ ಬಳಿ ಈ ಸಂಸ್ಥೆಯ ಕಾರ್ಯಕರ್ತರು ಸ್ಟ್ಯಾಂಡ್ ವೊಂದನ್ನು ಅಳವಡಿಸಿಕೊಂಡು ಅದರಲ್ಲಿ ಬಾಳೆಹಣ್ಣು, ಕಿತ್ತಳೆ, ಮೂಸಂಬಿ, ಬಿಸ್ಕೆಟ್, ನೀರಿನ ಬಾಟಲಿಗಳನ್ನು ಶೇಖರಿಸಿಡುತ್ತಿದ್ದಾರೆ. ಅಂದರೆ ಯಾರಿಗೆ ಹಸಿವಾಗಿದೆಯೋ ಅವರು ನೇರ ಸ್ಟ್ಯಾಂಡ್ ಬಳಿ ತೆರಳಿ ‘ಸುರಕ್ಷಿತ ಅಂತರ’ ಕಾಪಾಡಿಕೊಂಡು ತಮಗೆ ಇಷ್ಟವಾದ ಹಣ್ಣು ಹಂಪಲು ತಿನ್ನಬಹುದು. ನೀರು ಕುಡಿಯಬಹುದು. ಎಲ್ಲವೂ ಉಚಿತ !. ಆದರೆ ಯಾರೂ ಕೈಗೆತ್ತಿಕೊಂಡು ಹೋಗುವಂತಿಲ್ಲ.
ಹಸಿದವರನ್ನು ಇಲ್ಲಿ ಯಾರೂ ಕೂಡ ಯಾವ ಕಾರಣಕ್ಕೂ ಧರ್ಮ, ಜಾತಿ, ವರ್ಗ ನೋಡುವುದಿಲ್ಲ. ಅಲ್ಲದೆ ಭಿಕ್ಷುಕರು, ನಿರಾಶ್ರಿತರು, ವಲಸೆ ಕಾರ್ಮಿಕರು ಮಾತ್ರ ಈ ಸ್ಟ್ಯಾಂಡ್‌ನಲ್ಲಿ ಪೇರಿಸಿಟ್ಟ ಹಣ್ಣು ಹಂಪಲು ತಿನ್ನಬೇಕು ಎಂಬ ಯಾವ ನಿಯಮವೂ ಇಲ್ಲಿಲ್ಲ. ಯಾರಿಗೆ ಹಸಿವಾಗಿದೆಯೋ ಅವರು ನಿಸ್ಸಂಕೋಚದಿಂದ ಈ ಸ್ಟ್ಯಾಂಡ್ ಬಳಿ ತೆರಳಿ ಹೊಟ್ಟೆ ತುಂಬುವಷ್ಟು ತಿನ್ನಬಹುದು. ಈಗಾಗಲೆ ನೂರಾರು ಮಂದಿ ಇಲ್ಲಿಗೆ ಆಗಮಿಸಿ ಹಸಿವು ನೀಗಿಸಿದ್ದಾರೆ. ಆ ಮೂಲಕ ಸೌಹಾರ್ದ ಫೋರಂನ ಉದ್ದೇಶವನ್ನೂ ಸಫಲಗೊಳಿಸಿದ್ದಾರೆ.
ಕೈ ತೊಳೆಯಲು ನೀರಿನ ವ್ಯವಸ್ಥೆ: ಅಂದಹಾಗೆ ಪಕ್ಕದಲ್ಲೇ ಕೈ ತೊಳೆಯಲು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಸುಮಾರು 1 ಸಾವಿರ ಲೀ. ಸಾಮರ್ಥ್ಯದ ಟ್ಯಾಂಕಿಯಲ್ಲಿ ಇಲ್ಲಿ ಅಳವಡಿಸಲಾಗಿದೆ. ಕೊರೋನ ಹಿನ್ನೆಲೆಯಲ್ಲಿ ಆಗಾಗ ಕೈತೊಳೆಯಿರಿ ಎಂಬ ಸೂಚನೆಗೆ ಪೂರಕವಾಗಿ ಕೈ ತೊಳೆಯುವ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದೆರಡು ದಿನದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲು ಸೌಹಾರ್ದ ಫೋರಂ ಮುಂದಾಗಿದೆ.
ನಿರಾಶ್ರಿತರಿಗೆ ಊಟ-ತಿಂಡಿಯ ವ್ಯವಸ್ಥೆ: ಇಲ್ಲಿನ ಸಮಾಜ ಮಂದಿರದಲ್ಲಿ ಆಶ್ರಯ ಪಡೆದಿರುವ 65 ನಿರಾಶ್ರಿತರಿಗೆ ಶನಿವಾರ ಬೆಳಗ್ಗೆ ಮತ್ತು ಸಂಜೆ ಚಹಾ-ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಅಬುಲ್ ಅಲಾ ಪುತ್ತಿಗೆ ತಿಳಿಸಿದ್ದಾರೆ.
ದಾನಿಗಳಿಗೂ ಸ್ವಾಗತ: ಎಷ್ಟೋ ಮಂದಿ ದಾನಿಗಳಿಗೆ ಹಸಿದವರ ಹೊಟ್ಟೆ ತಣಿಸುವ ಆಸಕ್ತಿ ಇರುತ್ತದೆ. ಆದರೆ ಅರ್ಹರಿಗೆ ಹೇಗೆ ತಲುಪಿಸಬೇಕು ಎಂಬ ವಿಧಾನ ಗೊತ್ತಿರುವುದಿಲ್ಲ. ಅಂತಹವರು ಸೌಹಾರ್ದ ಫೋರಂನ ಸದಸ್ಯರನ್ನು ಸಂಪರ್ಕಿಸಬಹುದು. ಅಥವಾ ಹಣ್ಣು ಹಂಪಲು, ನೀರಿನ ಬಾಟಲುಗಳನ್ನು ಈ ಸ್ಟ್ಯಾಂಡ್‌ಗೆ ತಂದಿಡಬಹುದು. ಅಂತಹ ದಾನಿಗಳನ್ನು ಸೌಹಾರ್ದ ಫೋರಂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದೆ.
*ಉದ್ಯಮಿ ಹಾಗೂ ಸಮಾಜ ಸೇವಕ ಅಬುಲ್ ಅಲಾ ಪುತ್ತಿಗೆ ನೇತೃತ್ವದ ‘ಸೌಹಾರ್ದ ಫೋರಂ’ನಲ್ಲಿ ಸಿಎಚ್ ಅಬ್ದುಲ್ ಗಫೂರ್, ಹಝ್ದುಲ್ಲಾ ಇಸ್ಮಾಯೀಲ್, ಮುಹಮ್ಮದ್ ಆರೀಫ್, ಮುಹಮ್ಮದ್ ಹರ್ಷದ್, ಮುಹಮ್ಮದ್ ಶರೀಫ್, ಮುಹಮ್ಮದ್ ಫಾರೂಕ್, ಮಕ್ಬೂಲ್ ಹುಸೈನ್, ಎಲ್.ಆರ್.ರಿಝ್ವಾನ್, ಅಬ್ದುಲ್ ಹಮೀದ್ ಸೇವೆ ಸಲ್ಲಿಸುತ್ತಿದ್ದಾರೆ.
ಓರ್ವ ಸಿಬ್ಬಂದಿ ನೇಮಕ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಸಿವು ನೀಗಿಸಲು ಏನಾದರು ಹೊಸ ವ್ಯವಸ್ಥೆ ಮಾಡಬೇಕು ಎಂದು ಆಶಿಸಿ ಒಂದು ವಾರದ ಹಿಂದೆ ನಾವು ಈ ‘ಫುಡ್ ಸ್ಟ್ಯಾಂಡ್’ ಅಳವಡಿಸಿದ್ದೇವೆ. ಮೊದಲ ದಿನ ಜನರು ಇದನ್ನು ಹೇಗೆ ಸ್ವೀಕರಿಸಬಹುದು ಎಂಬ ಕಲ್ಪನೆಯೂ ನಮಗೆ ಇರಲಿಲ್ಲ. ಹಣ್ಣು ಹಂಪಲು, ನೀರನ್ನು ಶೇಖರಿಸಿಟ್ಟ ಕ್ಷಣಾರ್ಧದಲ್ಲಿ ಖಾಲಿಯಾಗತೊಡಗಿತು. ಅಂದರೆ ಹಸಿದವರು ಇಲ್ಲೇ ಇದನ್ನು ತಿನ್ನುವ ಬದಲು ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋಗತೊಡಗಿದರು. ಇದು ನಮಗೆ ಸಮಸ್ಯೆ ಮಾತ್ರವಲ್ಲ, ಸವಾಲು ಕೂಡ ಆಯಿತು. ಹಾಗಾಗಿ ನಾವು ಒಬ್ಬ ಸಿಬ್ಬಂದಿಯನ್ನು ನೇಮಿಸಿದೆವು. ಆ ಬಳಿಕ ಹಸಿದವರು ಇಲ್ಲೇ ತಿನ್ನತೊಡಗಿದ್ದಾರೆ. ಯಾರೂ ಕೈಗೆತ್ತಿಕೊಂಡು ಹೋಗುತ್ತಿಲ್ಲ. ಹಸಿದವರು ಎಷ್ಟು ಬೇಕಾದರು ತಿನ್ನಬಹುದು. ಆದರೆ ವ್ಯರ್ಥ ಮಾಡುವಂತಿಲ್ಲ. ಮಾನವೀಯ ದೃಷ್ಟಿಯಿಂದ ಆರಂಭಿಸಿದ ನಮ್ಮ ಈ ಸೇವೆಗೆ ಪೊಲೀಸ್ ಇಲಾಖೆ ಸಹಿತ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಸರಕಾರ ಲಾಕ್‌ಡೌನ್ ಹಿಂದಕ್ಕೆ ಪಡೆಯುವವರೆಗೆ ಇದು ಮುಂದುವರಿಯುತ್ತಿದೆ. ಹಸಿದವರ ಹೊಟ್ಟೆ ತಣಿಸಲು ದಾನಿಗಳು ಕೂಡ ಮುಂದೆ ಬರಬಹುದು. ಹಣ್ಣು ಹಂಪಲು, ನೀರಿನ ಬಾಟಲಿನ ವ್ಯವಸ್ಥೆ ಕಲ್ಪಿಸಿ ನಮ್ಮೀ ಸೇವೆಯೊಂದಿಗೆ ಕೈ ಜೋಡಿಸಬಹುದು.
- ಅಬುಲ್ ಅಲಾ ಪುತ್ತಿಗೆ
ಸದಸ್ಯರು, ಸೌಹಾರ್ದ ಫೋರಂ-ಮೂಡುಬಿದಿರೆ






.jpeg)



