‘ಸಾಮೂಹಿಕ ಹಸಿವಿನ ಘೋರ ಸ್ಥಿತಿ’: ಪ್ರಧಾನಿಗೆ ಮಾಜಿ ನೌಕಾಪಡೆ ಮುಖ್ಯಸ್ಥರ ಪತ್ರ
ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಬಗ್ಗೆ ಆತಂಕ
ಫೈಲ್ ಚಿತ್ರ
ಹೊಸದಿಲ್ಲಿ,ಎ.19: ಪ್ರಧಾನಿ ನರೇಂದ್ರ ಮೋದಿಯವರು ಲಾಕ್ಡೌನ್ ವಿಸ್ತರಣೆಯನ್ನು ಘೋಷಿಸಲು ಎ.14ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತೀವ್ರ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರ ಬಗ್ಗೆ ಉಲ್ಲೇಖಿಸದಿದ್ದಕ್ಕಾಗಿ ಭಾರತೀಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್.ರಾಮದಾಸ್ ಅವರು ತೀವ್ರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಮೋದಿಯವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರುವ ರಾಮದಾಸ್,ಅತಂತ್ರರಾಗಿರುವ ಲಕ್ಷಾಂತರ ವಲಸೆ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಲು ಸರಕಾರದ ಹೆಜ್ಜೆಗಳು ಮತ್ತು ಯೋಜನೆಗಳ ಬಗ್ಗೆ ನಿಮ್ಮ ಭಾಷಣದಲ್ಲಿ ಹೆಚ್ಚಿನ ನಿರ್ದಿಷ್ಟ ಮಾಹಿತಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಅದು ನಿರೀಕ್ಷೆಯಾಗಿಯೇ ಉಳಿಯಿತು ಎಂದು ತಿಳಿಸಿದ್ದಾರೆ.
ಮಾ.27ರಂದು ಬರೆದಿದ್ದ ತನ್ನ ಹಿಂದಿನ ಪತ್ರದಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಸಶಸ್ತ್ರ ಪಡೆಗಳ ಬೃಹತ್ ಮಾನವ ಶಕ್ತಿಯನ್ನು ಬಳಸಿಕೊಳ್ಳುವ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ತನ್ನ ಸಲಹೆಯನ್ನು ರಾಮದಾಸ್ ಮೋದಿಯವರಿಗೆ ನೆನಪಿಸಿದ್ದಾರೆ. ಸಶಸ್ತ್ರ ಪಡೆಗಳು ಹಲವಾರು ವಿಧಗಳಲ್ಲಿ ಸ್ಥಳೀಯಾಡಳಿತಗಳಿಗೆ ನೆರವಾಗಬಲ್ಲವು, ಇದಕ್ಕಾಗಿ ಸ್ಥಳೀಯಾಡಳಿತಗಳಿಂದ ಕೋರಿಕೆಗಾಗಿ ಕಾಯದೇ ಅವುಗಳಿಗೆ ಸಹಾಯ ಹಸ್ತ ಚಾಚುವಂತೆ ಅವರು ಆ ಪತ್ರದಲ್ಲಿ ಸೂಚಿಸಿದ್ದರು.
ದೇಶಾದ್ಯಂತ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ರಾಶಿ ಬಿದ್ದಿರುವ ಆಹಾರ ಧಾನ್ಯಗಳನ್ನು ಪಡೆಯಲು ಮತ್ತು ಸಾರ್ವಜನಿಕರಿಗೆ ವಿತರಿಸಲು ಜಿಲ್ಲಾ ಆಡಳಿತಗಳಿಗೆ ಅಧಿಕಾರ ನೀಡುವಂತೆಯೂ ರಾಮದಾಸ್ ತನ್ನ ಹಿಂದಿನ ಪತ್ರದಲ್ಲಿ ಸೂಚಿಸಿದ್ದರು. ಯಾವುದೇ ತುರ್ತುಸ್ಥಿತಿಯ ಅಗತ್ಯಕ್ಕಿಂತ ಮೂರು ಪಟ್ಟು ಹೆಚ್ಚಿನ ಆಹಾರ ಧಾನ್ಯಗಳು ದೇಶದಲ್ಲಿ ದಾಸ್ತಾನಿವೆ. ಪ್ರಸಕ್ತ ಸ್ಥಿತಿಯೂ ತುರ್ತು ಸ್ಥಿತಿಗಿಂತ ಭಿನ್ನವಾಗಿಲ್ಲ. ದಿಢೀರ್ ಲಾಕ್ಡೌನ್ ಹೇರಿಕೆಯಿಂದಾಗಿ ಸಾಮೂಹಿಕ ಹಸಿವಿನ ಘೋರ ಸ್ಥಿತಿಯು ಸೃಷ್ಟಿಯಾಗಿದೆ. ಜನರ ಬಳಿ ಪಡಿತರ ಚೀಟಿ ಇರಲಿ ಇಲ್ಲದಿರಲಿ,ಈ ಆಹಾರ ಧಾನ್ಯಗಳ ದಾಸ್ತಾನನ್ನು ಅವರಿಗೆ ತಕ್ಷಣವೇ ಲಭ್ಯವಾಗಿಸದಿದ್ದರೆ ಅದು ಅತ್ಯಂತ ಅಗತ್ಯ ಸಂದರ್ಭದಲ್ಲಿಯೂ ಆಹಾರ ಧಾನ್ಯಗಳ ಅಕ್ರಮ ದಾಸ್ತಾನಿಗೆ ಸಮನಾಗುತ್ತದೆ ಎಂದು ರಾಮದಾಸ್ ಪತ್ರದಲ್ಲಿ ಬರೆದಿದ್ದಾರೆ.
ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಸಶಸ್ತ್ರ ಪಡೆಗಳು ಈಗಾಗಲೇ ಆರೋಗ್ಯ ರಕ್ಷಣೆ,ಔಷಧಿಗಳು,ಕ್ವಾರಂಟೈನ್ ಕೇಂದ್ರಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉದಾತ್ತ ಸೇವೆಯನ್ನು ಸಲ್ಲಿಸುತ್ತಿವೆ. ಹಲವಾರು ರಾಜ್ಯ ಮತ್ತು ಜಿಲ್ಲಾ ಆಡಳಿತಗಳೂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿವೆ. ಎನ್ಜಿಒಗಳು, ನಾಗರಿಕ ಸಮಾಜದ ಗುಂಪುಗಳು ಮತ್ತು ಧಾರ್ಮಿಕ ಸಂಸ್ಥೆಗಳೂ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಇದೆಲ್ಲ ನಿಜಕ್ಕೂ ಅಭಿನಂದನೀಯವಾಗಿದೆ ಎಂದಿರುವ ರಾಮದಾಸ್, ಕೊರೋನ ವೈರಸ್ ಸಮಸ್ಯೆ ಅಭೂತಪೂರ್ವವಾಗಿದೆ ಮತ್ತು ನಮ್ಮ ಪ್ರತಿಕ್ರಿಯೆಯೂ ಅದೇ ರೀತಿಯಿರಬೇಕು ಎಂದಿದ್ದಾರೆ.
‘1948ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆ ನಡೆದಾಗ ಅದೆಷ್ಟೋ ಜನರು ಆಘಾತಕ್ಕೊಳಗಾಗಿದ್ದನ್ನು ನಾನು ಮರೆತಿಲ್ಲ. ಆ ಯಾತನಾಮಯ ಘಟನೆಯ ಹೊರತಾಗಿಯೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನದ ಅಂಗೀಕಾರವು ಭಾರತೀಯರಿಗೆ ಹೊಸ ಹುರುಪನ್ನು ನೀಡಿತ್ತು. ಎಲ್ಲ ಭಾರತೀಯರು ಸಮಾನರು ಎಂಬ ದೂರದೃಷ್ಟಿಯು ಇಂದಿಗೂ ನಮ್ಮನ್ನು ಮುನ್ನಡೆಸುತ್ತಿದೆ’ ಎಂದಿದ್ದಾರೆ.
“ಇಂದು ನಮ್ಮ ಸಮಾಜದಲ್ಲಿ ಅಸಹಿಷ್ಣುತೆ,ಧರ್ಮದ ದುರುಪಯೋಗ, ದ್ವೇಷಭಾಷಣಗಳು, ಅಲ್ಪಸಂಖ್ಯಾತರನ್ನು ವಿಶೇಷವಾಗಿ ನಮ್ಮ ಸಶಸ್ತ್ರ ಪಡೆಗಳ ಹಲವಾರು ಸಿಬ್ಬಂದಿ ಮುಸ್ಲಿಮರಾಗಿದ್ದಾರೆ ಎನ್ನುವುದನ್ನೂ ಮರೆತು ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿಕೊಳ್ಳುವಿಕೆ ಇವೆಲ್ಲ ಹೆಚ್ಚುತ್ತಿರುವುದು ತೀವ್ರ ಕಳವಳ ಮತ್ತು ದುಃಖವನ್ನುಂಟು ಮಾಡುತ್ತಿದೆ. ನಮ್ಮ ನಿಯಂತ್ರಣದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಮತ್ತು ಎಲ್ಲ ವರ್ಗಗಳು,ಧರ್ಮಗಳು ಮತ್ತು ಸಮುದಾಯಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊರೋನ ವೈರಸ್ ಸೃಷ್ಟಿಸಿರುವ ಈ ದುರಂತ ಬಿಕ್ಕಟ್ಟಿನ ವಿರುದ್ಧ ಒಗ್ಗೂಡಿ ಹೋರಾಡಬೇಕಿದೆ” ಎಂದು ರಾಮದಾಸ್ ಪತ್ರದಲ್ಲಿ ಬರೆದಿದ್ದಾರೆ.
ಕೊರೋನ ವೈರಸ್ ಹುಟ್ಟಡಗಿಸಲು ಭಾರತದ ಪ್ರಯತ್ನಗಳನ್ನು ಜಾಗತಿಕ ಸಮುದಾಯವು ಮೈಯೆಲ್ಲ ಕಣ್ಣಾಗಿಸಿಕೊಂಡು ನೋಡುತ್ತಿರುವ ಈ ಸಂದರ್ಭದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ಕುಚೇಷ್ಟೆಯ ಅಪಪ್ರಚಾರವನ್ನು ಹರಿಬಿಡುತ್ತಿರುವುದು ನಮ್ಮ ದೇಶಕ್ಕೆ ಯಾವುದೇ ಶೋಭೆಯನ್ನು ತರುವುದಿಲ್ಲ ಎಂದಿದ್ದಾರೆ.
ಮೋದಿಯವರು ಭಾರತದ ಸಂವಿಧಾನ ಮತ್ತು ‘ವಸುದೈವ ಕುಟುಂಬಕಂ’ನಲ್ಲಿ ತನ್ನ ನಂಬಿಕೆಯನ್ನು ಪದೇ ಪದೇ ವ್ಯಕ್ತಪಡಿಸಿರುವುದನ್ನು ನೆನಪಿಸಿರುವ ರಾಮದಾಸ್, ಧರ್ಮ, ಜಾತಿ, ಜನಾಂಗೀಯತೆ,ವರ್ಗ ಅಥವಾ ವೃತ್ತಿಯನ್ನು ಆಧರಿಸಿ ಯಾವುದೇ ವ್ಯಕ್ತಿ,ಸಮುದಾಯ ಅಥವಾ ಧರ್ಮದ ವಿರುದ್ಧ ಯಾವುದೇ ಪೂರ್ವಗ್ರಹವನ್ನು ತೋರುವ ಎಲ್ಲ ಕೃತ್ಯಗಳಿಗೆ ನಿಮ್ಮ ಸರಕಾರ ಮತ್ತು ಪಕ್ಷ ಶೂನ್ಯ ಸಹನೆಯನ್ನು ಹೊಂದಿರುತ್ತದೆ ಎನ್ನುವುದನ್ನು ಖಚಿತಪಡಿಸಲು ತ್ವರಿತ ಮತ್ತು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕೃಪೆ: Thewire.in