ಬಂಟ್ವಾಳ: ಕೊರೋನ ಸೋಂಕಿತ ಮಹಿಳೆ ಮೃತ್ಯು ; ವಿರೋಧದ ಮಧ್ಯೆ ಅಂತ್ಯಕ್ರಿಯೆ
ಮಂಗಳೂರು, ಎ.19: ಕೊರೋನ ಸೋಂಕಿನಿಂದ ಮೃತಪಟ್ಟ ಬಂಟ್ವಾಳದ ಮಹಿಳೆಯ ಮೃತದೇಹವನ್ನು ನಗರದ ಬೋಳೂರು ಸ್ಮಶಾನಕ್ಕೆ ರವಿವಾರ ಅಂತ್ಯಕ್ರಿಯೆಗೆ ತಂದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಮಧ್ಯೆ ಅಧಿಕಾರಿಗಳು ಸ್ಥಳೀಯರಿಗೆ ಮನವರಿಕೆ ಮಾಡಿದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತಿಳಿದು ಬಂದಿದೆ.
ಮಹಿಳೆಯ ಮೃತದೇಹವನ್ನು ಬೋಳೂರು ಸ್ಮಶಾನಕ್ಕೆ ತಂದು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿಯ ನಿರ್ಧರಿಸಿತು. ಅದರಂತೆ ಅಧಿಕಾರಿಗಳು, ವೈದ್ಯರು, ಪೊಲೀಸರು ರವಿವಾರ ಸಂಜೆ ಮೃತದೇಹವನ್ನು ಬೋಳೂರಿಗೆ ತಂದಾಗ ಸ್ಥಳೀಯರು ಅಂತ್ಯಕ್ರಿಯೆ ನಡೆಸಲು ಆಕ್ಷೇಪ ನಡೆಸಿದರು ಎನ್ನಲಾಗಿದೆ. ಈ ಸಂದರ್ಭ ಹಿರಿಯ ಅಧಿಕಾರಿಗಳು ‘ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸುವುದರಿಂದ ಸ್ಥಳೀಯವಾಗಿ ಯಾವುದೇ ತೊಂದರೆಯಿಲ್ಲ’ ಎಂದು ಮನವರಿಕೆ ಮಾಡಿದರು. ಆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.
Next Story





