ಬೀದರ್ ನಲ್ಲಿ ಇಬ್ಬರು ಕೊರೋನ ಶಂಕಿತರ ಸಾವು ಎಂಬ ‘ಸುವರ್ಣ ನ್ಯೂಸ್’ ಸುದ್ದಿ ಸುಳ್ಳು: ಬೀದರ್ ಆರೋಗ್ಯ ಅಧಿಕಾರಿ
'ಕೊರೋನ ರಣಕೇಕೆಗೆ ಕರ್ನಾಟಕವೇ ತತ್ತರ' ಎಂದು ಭೀತಿ ಹುಟ್ಟಿಸಿದ್ದ ಚಾನೆಲ್

ಕೊರೋನ ಬಿಕ್ಕಟ್ಟಿನ ನಡುವೆ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಪಟ್ಟಿಗೆ ಕನ್ನಡದ ‘ಸುವರ್ಣ ನ್ಯೂಸ್’ ಸೇರ್ಪಡೆಗೊಂಡಿದೆ. ಬೀದರ್ ನಲ್ಲಿ ಇಂದು ಇಬ್ಬರು ಕೊರೋನ ಶಂಕಿತರು ಸಾವನ್ನಪ್ಪಿದ್ದಾರೆ ಎಂದು ಸುವರ್ಣ ನ್ಯೂಸ್ ಪ್ರಸಾರ ಮಾಡಿದ ಸುದ್ದಿ ಸುಳ್ಳು ಎಂದು ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಕಚೇರಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ಪ್ರಕಟನೆ ನೀಡಿರುವ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, “ಬೀದರ್ ನಲ್ಲಿ ಶಂಕಿತ ಕೊರೋನದಿಂದ ಇಬ್ಬರು ಮೃತಪಟ್ಟಿದ್ದಾರೆ ಎಂದು ಸುವರ್ಣ ನ್ಯೂಸ್ ಪ್ರಕಟಿಸಿರುವ ಮಾಹಿತಿ ಸತ್ಯಕ್ಕೆ ದೂರವಾಗಿದೆ. 65 ವರ್ಷದ ಮಹೆಬೂಬ್ ಅಲಿ ಬೆಳಗ್ಗೆ 6:18ಕ್ಕೆ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಇವರು ಸೆಪ್ಟಿಸಿಮಿಯಾದಿಂದ ಬಳಲುತ್ತಿದ್ದು, ಸಾವನ್ನಪ್ಪಿದ್ದಾರೆ. ಇವರಲ್ಲಿ ಕೊರೋನ ಸೋಂಕಿಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಇರಲಿಲ್ಲ. ಅಸ್ಮಾ ಬೇಗಂ ಎಂಬವರು ಎಪ್ರಿಲ್ 18ರಂದು ಆಸ್ಪತ್ರೆಗೆ ದಾಖಲಾಗಿದ್ದು, ಇವರಿಗೆ ಪ್ಯಾರಾಲೈಸಿಸ್ ಮತ್ತು ಜಿ.ಬಿ. ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿದ್ದರು. ಇವರಿಗೂ ಕೂಡ ಕೊರೋನ ಸೋಂಕಿಗೆ ಸಂಬಂಧಿಸಿದ ಯಾವುದೇ ಲಕ್ಷಣಗಳು ಇರಲಿಲ್ಲ” ಎಂದು ತಿಳಿಸಿದೆ.

ಇಂದು ಈ ಬಗ್ಗೆ ಸುವರ್ಣ ನ್ಯೂಸ್ “ಕೊರೋನ ರಣಕೇಕೆಗೆ ಕರ್ನಾಟಕವೇ ತತ್ತರ, ರಾಜ್ಯದಲ್ಲಿ ಒಂದೇ ದಿನ ನಾಲ್ವರು ಶಂಕಿತರು ಸಾವು, ಸುವರ್ಣ ನ್ಯೂಸ್ ಬಿಗ್ ಬ್ರೇಕಿಂಗ್ ನ್ಯೂಸ್, ಬೀದರ್ ನಲ್ಲಿ ಐಸೊಲೇಶನ್ ನಲ್ಲಿ ಇದ್ದ ಇಬ್ಬರು ಶಂಕಿತರು, ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಶಂಕಿತರು, ವೆಂಟಿಲೇಟರ್ ಗೆ ಹಾಕಿದ 2 ಗಂಟೆಯಲ್ಲಿ ಶಂಕಿತ ಸಾವು” ಎಂದು ಭೀತಿ ಹುಟ್ಟಿಸುವಂತಹ ಸುದ್ದಿ ಪ್ರಸಾರ ಮಾಡಿತ್ತು.







