ಹೊರಾಜ್ಯದವರ ಅತಿಕ್ರಮಣ ಮೀನುಗಾರಿಕೆ ತಡೆಯಲು ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಎ.19: ಅನ್ಯರಾಜ್ಯದ ಮೀನುಗಾರರು ರಾಜ್ಯದೊಳಗೆ ಅಕ್ರಮ ವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿರುವ ಬಗ್ಗೆ ಮೀನುಗಾರರು ದೂರು ನೀಡಿದ್ದಾರೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲಾಧಿಕಾರಿ ಜೊತೆ ಮಾತನಾಡಿ, ಕಾನೂನು ಬಾಹಿರ ಮೀನುಗಾರಿಕೆ ತಡೆಯುವಂತೆ ಸೂಚನೆ ಕೊಟ್ಟಿದ್ದೇನೆ. ಅದರಂತೆ ಅವರು ಕರಾವಳಿ ಕಾವಲು ಪಡೆಗೆ ಆದೇಶ ನೀಡಲಿದ್ದಾರೆ. ಅದೇ ರೀತಿ ಅನ್ಯ ರಾಜ್ಯದವರ ಲೈಟ್ ಫಿಶಿಂಗ್ ಕೂಡ ತಡೆಯಲಾಗುವುದು ಎಂದು ರಾಜ್ಯ ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ಕರಾವಳಿಯಲ್ಲಿ ಮೀನುಗಾರಿಕೆಗೆ ಯಾವುದೇ ಅಡ್ಡಿ ಇಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು ಆಗಿದೆ. ಯಾಂತ್ರಿಕ ಮೀನುಗಾರಿಕೆ ಆರಂಭಗೊಂಡರೆ ಸಾವಿರಾರು ಮಂದಿ ಸೇರುತ್ತಾರೆ. ಮೀನು ಗಾರಿಕೆಗೆ ಅವಕಾಶ ಹೆಚ್ಚಿಸಲು ಹಂತ ಹಂತವಾಗಿ ತೀರ್ಮಾನ ಮಾಡಲಾಗು ವುದು. ಮುಂದಿನ ಎರಡು ದಿನಗಳಲ್ಲಿ ಅಧಿಕಾರಿಗಳ ಜೊತೆ ಸಮಾಲೋಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.
ಲಾಕ್‌ಡೌನ್ ಸಡಿಲಿಕೆ ನಿರ್ಧಾರ ವಾಪಾಸ್ ತೆಗೆದುಕೊಂಡ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ. ಜನಾಭಿಪ್ರಾಯಕ್ಕೆ ಮಾನ್ಯತೆ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ. ಲಾಕ್‌ಡೌನ್ ಸಡಿಲಿಕೆಗೆ ಮುಖ್ಯಮಂತ್ರಿಗಳು ಒಲವು ತೋರಿದ್ದರು. ಕಠಿಣವಾದ ಜೀವನ ನಡೆಸಲು ಸಿದ್ಧ ಎಂಬ ಜನಾಭಿಪ್ರಾಯ ಮೂಡಿದೆ ಎಂದರು.
ಕರೋನಾ ನಿಯಂತ್ರಿಸಲು ಜನರೇ ಲಾಕ್‌ಡೌನ್ ಮುಂದುವರಿಸಿ ಎಂದು ಹೇಳಿದ್ದಾರೆ. ಆದುದರಿಂದ ಪುನರ್ ಪರಿಶೀಲನೆ ನಡೆಸಿ ಕಠಿಣ ಲಾಕ್‌ಡೌನ್ ಮುಂದುವರಿಸಲಾಗಿದೆ. ಜನರು ಮತ್ತು ಸರಕಾರದ ಮೇಲೆ ಆರ್ಥಿಕ ಹೊರೆ ಬರುವುದು ಸಹಜ. ಕರೋನಾ ನಿಯಂತ್ರಣಕ್ಕೆ ಬರುವವರಿಗೆ ಎಲ್ಲರು ಮನಸ್ಸು ಕಠೋರ ಮಾಡಿಕೊಳ್ಳಬೇಕು. ಅದೇ ರೀತಿ ಸರಳ ಜೀವನ ನಡೆಸುವುದು ಕೂಡ ಅನಿವಾರ್ಯಾಗಲಿದೆ ಎಂದು ಸಚಿವರು ತಿಳಿಸಿದರು.
ಮುಜುರಾಯಿ ದೇವಸ್ಥಾನಗಳಿಂದ ನೆರವು ನೀಡಲಾಗುತ್ತಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಿಂದ 2500 ಕಿಟ್, ಮಂದಾರ್ತಿ ದೇವಾಲಯ ದಿಂದ 2500 ಕಿಟ್ ಹಾಗೂ ಉಡುಪಿ ಅನಂತೇಶ್ವರ ದೇವಸ್ಥಾನದಿಂದ 1000 ಆಹಾರ ಕಿಟ್ ವಿತರಣೆ ಮಾಡಲಾಗಿದೆ. ಅರ್ಚಕರಿಗೆ ಆಹಾರ ಸಾಮಾಗ್ರಿ ಕೊಡಲು ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು. ಅರ್ಚಕರ ತಸ್ತೀಕು ಮುಂಗಡವಾಗಿ ನೀಡುವ ಬಗ್ಗೆ ಚಿಂತನೆ ನಡೆಸ ಲಾಗುವುದು. ಕಲಾವಿದರು ಮತ್ತು ಅರ್ಚಕರಿಗೆ ಆಹಾರ ನೀಡಲಾಗುವುದು ಎಂದರು.
ಹೊರರಾಜ್ಯದಲ್ಲಿರುವ ಕನ್ನಡಿಗರ ಹಿತ ಕಾಯಲು ಬದ್ಧ
ಬೆಂಗಳೂರು, ಮುಂಬೈನಲ್ಲಿರುವ ಕರಾವಳಿ ಮೂಲದ ಸಾವಿರಾರು ಮಂದಿ ಜಿಲ್ಲೆಗೆ ಬರುವ ಬಗ್ಗೆ ಕರೆ ಮಾಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೋನಾ ವ್ಯಾಪಕವಾಗಿದ್ದು, ಅಲ್ಲಿರುವ ಕನ್ನಡಿಗರ ಹಿತ ಕಾಯಲು ಸರಕಾರ ಬದ್ದವಾಗಿದೆ. ಈ ಬಗ್ಗೆ ಸಿಎಂ ಮತ್ತು ಮುಖ್ಯ ಕಾರ್ಯದರ್ಶಿ ಜೊತೆಗೆ ಮಾತನಾಡಿದ್ದೇನೆ. ಕನ್ನಡಿಗರಿಗೆ ಇರುವಲ್ಲೇ ಆಹಾರ ಮತ್ತು ಔಷಧ ಸಿಗುವಂತೆ ನೋಡಿಕೊಳ್ಳಲಾ ಗುತ್ತಿದೆ. ಕೇರಳದಲ್ಲಿರುವ ನಮ್ಮ ಮೀನುಗಾರರ ಹಿತವನ್ನೂ ಕೂಡ ಕಾಯಲಾಗು ತ್ತಿದೆ. ಇವರೆಲ್ಲ ಕೊರೋನಾ ಗಂಡಾಂತರ ಮುಗಿಯುವವರೆಗೆ ಆತ್ಮಸ್ಥೈರ್ಯ ಕಾಪಾಡಿ ಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.







