ಉಡುಪಿ: ವಿವಿಧ ವಲಯಗಳ ಸಂಕಷ್ಟ ಪರಿಹಾರಕ್ಕೆ ಕಾಂಗ್ರೆಸ್ ಒತ್ತಾಯ
ಉಡುಪಿ, ಎ.19: ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ವಲಯಗಳು ಸಂಕಷ್ಟವನ್ನು ಎದುರಿಸುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಒತ್ತಾಯಿಸಿದ್ದಾರೆ.
ಲಾಕ್‌ಡೌನ್‌ನಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಪ್ರತಿ ದಿನ 8 ರಿಂದ 10 ಕೋಟಿ ರೂ. ಆದಾಯ ಕೊರತೆಯಾಗಿದೆ. ಮೀನುಗಾರರ ಈ ಸಂಕಷ್ಟದ ಬಗ್ಗೆ ಗಮನಹರಿಸಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಕೃಷಿಕರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ 3 ಲಕ್ಷ ರೂ.ಗಳ ಸಾಲ ಸೇರಿದಂತೆ ನಾನಾ ರೀತಿಯ ಸಾಲಗಳನ್ನು ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರಕಾರ ಘೋಷಿಸಿದ ಜನ್‌ಧನ್ ಖಾತೆಗೆ ಹಣ ಜಮೆಯಾಗುವ ಬಗ್ಗೆ ಕ್ರಮ ಕೈಗೊಳ್ಳಬೇಕು. ರ್ಯಾಪಿಡ್ ಟೆಸ್ಟ್ ಕಿಟ್ ಹಾಗೂ ಪಿಪಿಇಗಳ ಕೊರತೆಯನ್ನು ಸರಕಾರ ನೀಗಿಸಬೇಕು. ಪಡಿತರದಲ್ಲಿ ಕೇವಲ ಅಕ್ಕಿ ಜೊತೆ ಗೋಧಿಯನ್ನು ವಿತರಣೆ ಮಾಡುವಂತೆ ಸರಕಾರ ಆದೇಶ ನೀಡಬೇಕು. ಬಿಪಿಎಲ್ ಕಾರ್ಡ್ ದಾರರೊಂದಿಗೆ ಎಪಿಎಲ್ ಕಾರ್ಡ್‌ದಾರರಿಗೂ ಪಡಿತರ ವ್ಯವಸ್ಥೆಯನ್ನು ವಿಸ್ತರಿಸ ಬೇಕು. ಸಂಕಷ್ಟದಲ್ಲಿರುವ ಎಲ್ಲಾ ಕಾರ್ಮಿಕ ವರ್ಗಗಳಿಗೂ ಸರಕಾರ ಸ್ಪಂದಿಸ ಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





