ವಲಸೆ ಕಾರ್ಮಿಕರ ಸಾಗಾಟ: ಲಾರಿ ಸಹಿತ ಚಾಲಕ, ಕ್ಲೀನರ್ ವಶಕ್ಕೆ
ಬೈಂದೂರು, ಎ.19: ಲಾಕ್‌ಡೌನ್ ಮಧ್ಯೆಯೂ ನಿಯಮ ಉಲ್ಲಂಘಿಸಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಕರೆದೊಯ್ಯುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್‌ಗಳನ್ನು ಬೈಂದೂರು ಪೊಲೀಸರು ಎ.18ರಂದು ರಾತ್ರಿ 11.30ರ ಸುಮಾರಿಗೆ ಶಿರೂರು ಟೋಲ್‌ಗೇಟ್ ಬಳಿಯ ಚೆಕ್‌ಪೋಸ್ಟ್ ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ವಲಸೆ ಕಾರ್ಮಿಕರು ಕೂಲಿ ಕೆಲಸದ ಬಗ್ಗೆ ಉಡುಪಿ ಜಿಲ್ಲೆಗೆ ಬಂದಿದ್ದು, ಮಂದರ್ತಿ ಪರಿಸರದಲ್ಲಿ ಕೆಲಸ ಮಾಡಿಕೊಂಡಿ ದ್ದರು. ಲಾಕ್ ಡೌನ್‌ನಿಂದಾಗಿ ಊರಿಗೆ ಹೋಗಲು ಸಾಧ್ಯವಾಗದ ಇವರು, ತಮ್ಮ ಊರಿನ ಕಡೆ ಲಾರಿ ಹೋಗುತ್ತಿರುವ ಬಗ್ಗೆ ಮಾಹಿತಿ ತಿಳಿದರೆನ್ನಲಾಗಿದೆ. ಅದರಂತೆ ರಾತ್ರಿ ವೇಳೆ ಈ ಲಾರಿಯಲ್ಲಿ 11 ಮಂದಿ ವಲಸೆ ಕಾರ್ಮಿಕರು ಬ್ರಹ್ಮಾವರ ಪ್ರಯಾಣ ಹೊರಟಿದ್ದರು.
ಶಿರೂರಿನಲ್ಲಿರುವ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಪೊಲೀಸರು ಲಾರಿಯನ್ನು ತಡೆದು ಪರಿಶೀಲಿಸಿದಾಗ ಚಾಲಕ ಮತ್ತು ಇಬ್ಬರು ಕ್ಲೀನರ್‌ಗಳಲ್ಲದೆ ಹಿಂಬದಿ ಯಲ್ಲಿ 11 ಮಂದಿ ವಲಸೆ ಕಾರ್ಮಿಕರನ್ನು ಪ್ರಯಾಣಿಸುತ್ತಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಗೂಡ್ಸ್ ವಾಹನದಲ್ಲಿ ಪ್ರಯಾಣಿಕ ರನ್ನು ಸಾಗಿಸುತ್ತಿದ್ದ ಹಾಗೂ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಲಾರಿ ಮತ್ತು ಅದರ ಚಾಲಕ ಹಾಗೂ ಇಬ್ಬರು ಕ್ಲೀನರ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡರು. ಈ ಬಗ್ಗೆ ಬೈಂದೂರು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







