ಮೇ 3ರವರೆಗೆ ರಾಜ್ಯದಲ್ಲಿ ಮದ್ಯ ಮಾರಾಟ ನಿರ್ಬಂಧ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.19: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಹೇರಿರುವ ಲಾಕ್ಡೌನ್ ಅನ್ನು ಸೋಂಕು ರಹಿತ ಪ್ರದೇಶಗಳಲ್ಲಿ ಸಡಿಲಿಸಲು ಕೇಂದ್ರ ಸರಕಾರ ಸೂಚನೆ ನೀಡಿದ್ದು, ರಾಜ್ಯದಲ್ಲಿ ಎ.20ರ ಬಳಿಕ ಮದ್ಯದಂಗಡಿಗಳು ತೆರೆಯಲಿವೆ ಎಂಬ ಪಾನಪ್ರಿಯರ ನಿರೀಕ್ಷೆ ಹುಸಿಯಾಗಿದೆ.
ಲಾಕ್ಡೌನ್ ವಿಸ್ತರಣೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಎ.21ರಿಂದ ಮೇ 3ರ ಮದ್ಯರಾತ್ರಿಯ ವರೆಗೆ ರಾಜ್ಯದಲ್ಲಿನ ಎಲ್ಲ ಮದ್ಯ ಮಾರಾಟ ಸನ್ನದ್ದುಗಳನ್ನು ಮುಚ್ಚಲು ಅಬಕಾರಿ ಆಯುಕ್ತರು ಆದೇಶಿಸಿದ್ದು, ಈ ಅವಧಿಯಲ್ಲಿ ಆಲ್ಕೊಹಾಲ್ ಆಧರಿಸಿದ ಸ್ಯಾನಿಟೈಸರ್ ಉತ್ಪಾದಿಸುವ ಡಿಸ್ಟಿಲರಿಗಳನ್ನು ಹೊರತುಪಡಿಸಿ ಯಾವುದೇ ಇತರೆ ಉತ್ಪಾದನಾ ಘಟಕಗಳ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಮೇಲ್ಕಂಡ ಆದೇಶವನ್ನು ಪರಿಪೂರ್ಣವಾಗಿ ಜಾರಿ ಮಾಡುವುದು ಹಾಗೂ ಆದೇಶ ಉಲ್ಲಂಘಿಸುವ 'ಸನ್ನದ್ದು'ಗಳನ್ನು ರದ್ದುಪಡಿಸಲು ಅಬಕಾರಿ ಉಪ ಆಯುಕ್ತರು ಕ್ರಮ ಜರುಗಿಸಬೇಕು. ಇದರಲ್ಲಿ ಯಾವುದೇ ಲೋಪ ಕಂಡುಬಂದಲ್ಲಿ ಆಯಾ ವ್ಯಾಪ್ತಿಯ ಅಬಕಾರಿ ಉಪ ಆಯುಕ್ತರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.





