ವಲಸೆ ಕಾರ್ಮಿಕರ ಬವಣೆ ತಪ್ಪಿಸುವಲ್ಲಿ ಕಾರ್ಮಿಕ ಇಲಾಖೆ ವಿಫಲ : ಡಿವೈಎಫ್‌ಐ
ಮಂಗಳೂರು, ಎ.19: ದ.ಕ.ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿದ್ದು, ಲಾಕ್‌ಡೌನ್ ಸಂದರ್ಭ ಅವರ ವಸತಿಗಳನ್ನು ಗುರುತಿಸಿ ಆಹಾರ, ಪಡಿತರ ತಲುಪಿಸುವಲ್ಲಿ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ವಲಸೆ ಕಾರ್ಮಿಕರನ್ನು ಪೂರ್ಣವಾಗಿ ಕಡೆಗಣಿಸಿದ್ದಾರೆ. ಇದರಿಂದ ವಲಸೆ ಕಾರ್ಮಿಕರು ಆಹಾರ ಧಾನ್ಯಗಳಿಗೆ ಪರದಾಡುತ್ತಿದ್ದು, ದಾನಿಗಳನ್ನು ಹುಡುಕಿ ಕಂಡ ಕಂಡವರಲ್ಲಿ ಗೋಗರೆಯುವಂತಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.
ಜಿಲ್ಲಾ ಕೇಂದ್ರ ಮಂಗಳೂರು ಸಹಿತ ಸೇರಿದಂತೆ ವಿವಿಧೆಡೆ ರಾಜ್ಯ ಮತ್ತು ಹೊರ ರಾಜ್ಯಗಳ ಸಾವಿರಾರು ವಲಸೆ ಕಾರ್ಮಿಕರಿದ್ದಾರೆ. ಲಾಕ್‌ಡೌನ್ ಸಂದರ್ಭ ಎಲ್ಲಾ ವಲಸೆ ಕಾರ್ಮಿಕರಿಗೂ ಊಟ, ವಸತಿಯ ಭರವಸೆ ನೀಡಲಾಗಿತ್ತು. ಇದ್ದಲ್ಲಿಯೇ ಇದ್ದು ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಲಾಗಿತ್ತು. ಮನೆ, ಶೆಡ್‌ಗಳ ಬಾಡಿಗೆ ವಿನಾಯತಿ, ಗುತ್ತಿಗೆದಾರರು, ಬಿಲ್ಡರ್‌ಗಳಲ್ಲಿ ಅವರ ಕೈಕೆಳಗೆ ದುಡಿಯುವ ವಲಸೆ ಕಾರ್ಮಿಕರಿಗೆ ಆಹಾರ ಪೂರೈಸುವಂತೆ ಹೇಳಲಾಗಿತ್ತು. ಆದರೆ ಲಾಕ್‌ಡೌನ್ ಶುರುವಾಗಿ ಒಂದು ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಇನ್ನೂ ವಲಸೆ ಕಾರ್ಮಿಕರ ವಸತಿಗಳನ್ನು ಗುರುತಿಸುವಲ್ಲಿ ಕಾರ್ಮಿಕ ಇಲಾಖೆ ಪೂರ್ಣವಾಗಿ ವಿಫಲಗೊಂಡಿದೆ. ಕೆಲವು ವಸತಿಗಳಿಗಷ್ಟೆ ಆರಂಭದಲ್ಲಿ ಜಿಲ್ಲಾಡಳಿತ, ಪಾಲಿಕೆಯ ವತಿಯಿಂದ ದಿನಸಿಯ ಸಣ್ಣ ಕಿಟ್, ಸಿದ್ದಪಡಿಸಿದ ಆಹಾರ ದೊರಕಿತ್ತು. ಕೆಲವು ಗುತ್ತಿಗೆದಾರರು ತಮ್ಮ ಅಧೀನದ ಕಾರ್ಮಿಕರಿಗೆ ಆಹಾರಧಾನ್ಯ ಪೂರೈಸಿದ್ದು ಬಿಟ್ಟರೆ ಹೆಚ್ಚಿನ ಕಾರ್ಮಿಕರು ಆಹಾರಕ್ಕಾಗಿ ಕಂಡ ಕಂಡವರಲ್ಲಿ ಕೈಚಾಚುವ, ದಾನಿಗಳಿಗಾಗಿ ಕಾಯುವ ಸ್ಥಿತಿ ಇದೆ. ನಗರ ಪಾಲಿಕೆ ಸಿದ್ದಪಡಿಸಿ ನೀಡುತ್ತಿದ್ದ ಆಹಾರ ಸ್ಥಗಿತಗೊಂಡು ವಾರಗಳು ಕಳೆದಿದೆ. ಹೆಚ್ಚಿನ ಕಾರ್ಮಿಕರಿಗೆ ಜಿಲ್ಲಾಡಳಿತದ ವಾರ್‌ರೂಂ ಕುರಿತು ಅರಿವಿಲ್ಲ. ವಾರ್‌ರೂಂ ಸಂಪರ್ಕಿಸಿದರೂ ಹೆಚ್ಚಿನ ಸಂದರ್ಭದಲ್ಲಿ ನೆರವು ದೊರಕುತ್ತಿಲ್ಲ ಎಂದು ವಲಸೆ ಕಾರ್ಮಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಲಾಕ್‌ಡೌನ್ ಅವಧಿಯ ದಿನಗಳು ವಿಸ್ತರಣೆಗೊಂಡ ಈ ಸಂದರ್ಭ ವಲಸೆ ಕಾರ್ಮಿಕರ ಸಮಸ್ಯೆ ಬಿಗಡಾಯಿಸುತ್ತಿದೆ. ಉಳಿತಾಯದ ಹಣ, ಮಾಲಕರ ನೆರವು ನಿಂತು ಹಸಿವಿನಿಂದ ಕಂಗೆಡುವ ಸ್ಥಿತಿ ವಲಸೆ ಕಾರ್ಮಿಕರ ವಸತಿಗಳಲ್ಲಿ ಕಂಡು ಬರುತ್ತಿದೆ. ಕಾರ್ಮಿಕ ಇಲಾಖೆ ತಕ್ಷಣ ವಲಸೆ ಕಾರ್ಮಿಕರ ವಸತಿಗಳ ವಿವರಗಳನ್ನು ಗ್ರಾಮ, ವಾರ್ಡ್‌ವಾರು ಸಂಗ್ರಹಿಸಬೇಕು. ಕಟ್ಟಡ ಕಾರ್ಮಿಕ ಕಲ್ಯಾಣ ನಿಧಿ ಸಹಿತ ಜಿಲ್ಲಾಡಳಿತದ ನಿಧಿಗಳ ಮೂಲಕ ವಲಸೆ ಕಾರ್ಮಿಕರಿಗೆ ಆಹಾರ, ದಿನಸಿ ವ್ಯವಸ್ಥಿತ ರೀತಿಯಲ್ಲಿ ತಲುಪುವಂತೆ ಮಾಡಬೇಕು ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.







