ಕೊರೋನ ವೈರಸ್ನಿಂದ ಪೂರೈಕೆ ವ್ಯವಸ್ಥೆಗೆ ಭಾರೀ ವ್ಯತ್ಯಯವಾಗಲಿದೆ: ಅಮಿತಾಭ್ ಕಾಂತ್
ಫೈಲ್ ಚಿತ್ರ
ಹೊಸದಿಲ್ಲಿ,ಎ.19: ಕೊರೋನ ವೈರಸ್ ಸಾಂಕ್ರಾಮಿಕ ಪಿಡುಗು ಜಗತ್ತು ಮತ್ತೆಂದೂ ನೋಡದ ಬೃಹತ್ ಬಿಕ್ಕಟ್ಟು ಆಗಿದೆ ಮತ್ತು ಕೆಲಸದ ಸ್ವರೂಪದಲ್ಲಿ ಶಾಶ್ವತ ಬದಲಾವಣೆಗಳಿಗೆ ಕಾರಣವಾಗಲಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ಹೇಳಿದ್ದಾರೆ.
ಕೆಲಸದ ಸ್ಥಳಗಳಲ್ಲಿ ಕೊರೋನ ವೈರಸ್ನ ಪರಿಣಾಮಗಳ ಕುರಿತು ನೀತಿ ಆಯೋಗವು ಶನಿವಾರ ಆಯೋಜಿಸಿದ್ದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದ ಅವರು, ‘ನಾವಿಂದು ಪ್ರಕ್ಷುಬ್ಧ ಕಾಲಘಟ್ಟದ ಮೂಲಕ ಸಾಗುತ್ತಿದ್ದೇವೆ. ಕೆಲಸದ ಸ್ವರೂಪವು ಬದಲಾಗುತ್ತಿದೆ ’ಎಂದರು. ಕೊರೋನ ವೈರಸ್ ಪಿಡುಗಿನಿಂದಾಗಿ ಪೂರೈಕೆ ವ್ಯವಸ್ಥೆಯು ತೀವ್ರವಾಗಿ ಬಾಧಿತವಾಗಲಿದೆ ಎಂದ ಅವರು, ‘ನಾವು ಕೈಗಾರಿಕಾ ಕ್ರಾಂತಿ 4.0ರ ನಡುವೆಯೂ ಇದ್ದೇವೆ ’ಎಂದರು.
ವೀಡಿಯೊ ಕಾನ್ಫರೆನ್ಸ್ನಲ್ಲಿ ಪಾಲ್ಗೊಂಡಿದ್ದ ವಿಶ್ವ ಬ್ಯಾಂಕ್ನ ಭಾರತದ ನಿರ್ದೇಶಕ ಜುನೈದ್ ಹುಸೇನ್ ಅವರು,‘ಕೊರೋನ ವೈರಸ್ ಪಿಡುಗು ಆರ್ಥಿಕತೆಯನ್ನು ಮತ್ತು ಸಂಸ್ಥೆಗಳು ಕೆಲಸ ಮಾಡುವ ರೀತಿಯನ್ನು ಶಾಶ್ವತವಾಗಿ ಬದಲಿಸಲಿದೆ. ಅತ್ಯಂತ ವಿಭಿನ್ನವಾದ ಸಾಮಾಜಿಕ ರಕ್ಷಣೆ ವ್ಯವಸ್ಥೆಯನ್ನು,ವಿಭಿನ್ನವಾದ ಆರೋಗ್ಯ ವ್ಯವಸ್ಥೆಯನ್ನು ,ನಾವು ಕೆಲಸ ಮಾಡುವ ರೀತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ನಾನು ನೋಡುತ್ತಿದ್ದೇನೆ, ಆದರೆ ಇವೆಲ್ಲ ಈಗ ಆಗುತ್ತಿರುವ ಬದಲಾವಣೆಗಳ ಭಾಗಗಳೆಂದು ಪರಿಗಣಿಸಿದ್ದೇನೆ. ಜಗತ್ತು ಇನ್ನು ಮುಂದೆ ಮೊದಲಿನಂತಿರುವುದಿಲ್ಲ,ಬದಲಾಗಿ ಹೊಸ ವಾಸ್ತವಗಳನ್ನು ಅದು ಅಪ್ಪಿಕೊಳ್ಳಲಿದೆ ’ ಎಂದು ಹೇಳಿದರು.
‘ಕೊರೋನ ವೈರಸ್ ಪಿಡುಗು ಉದ್ಯಮಗಳ ಮರು ಆವಿಷ್ಕಾರಕ್ಕೆ ಅವಕಾಶವನ್ನು ಒದಗಿಸಿದೆ. ಪ್ರತಿಯೊಂದೂ ಬಿಕ್ಕಟ್ಟು ಒಳ್ಳೆಯ ಸವಾಲನ್ನು ಮುಂದಿಡುತ್ತದೆ. ಈ ಬದಲಾವಣೆಗಳನ್ನು ಸ್ವೀಕರಿಸಲು ನಾವು ಈ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಅದು ನಮ್ಮ ನಷ್ಟವಾಗಲಿದೆ ’ ಎಂದು ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್ವೇರ್ ಆ್ಯಂಡ್ ಸರ್ವಿಸ್ ಕಂಪನೀಸ್ನ ಅಧ್ಯಕ್ಷೆ ದೇಬಜಾನಿ ಘೋಷ್ ಹೇಳಿದರೆ,ಕೊರೋನ ವೈರಸ್ನಿಂದಾಗಿ ಉದ್ಯೋಗಗಳ ಸ್ವರೂಪ ಸಂಪೂರ್ಣವಾಗಿ ಬದಲಾಗಲಿದೆ ಎಂದು ಹಿರೋ ಎಂಟರ್ಪ್ರೈಸಸ್ನ ಅಧ್ಯಕ್ಷ ಸುನಿಲ ಮುಂಜಾಳ್ ಹೇಳಿದರು.