Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊರೋನ ವಿರುದ್ಧದ ಭದ್ರತೆ ಸೃಷ್ಟಿಸಿರುವ...

ಕೊರೋನ ವಿರುದ್ಧದ ಭದ್ರತೆ ಸೃಷ್ಟಿಸಿರುವ ಆಹಾರ ಅಭದ್ರತೆ

ವಾರ್ತಾಭಾರತಿವಾರ್ತಾಭಾರತಿ19 April 2020 11:36 PM IST
share
ಕೊರೋನ ವಿರುದ್ಧದ ಭದ್ರತೆ ಸೃಷ್ಟಿಸಿರುವ ಆಹಾರ ಅಭದ್ರತೆ

ವಿದೇಶಗಳಲ್ಲಿ ಕೊರೋನ ಕಾಯಿಲೆಯ ನೇರ ಪರಿಣಾಮಗಳಿಗೆ ಜನರು ಕಂಗಾಲಾಗಿದ್ದರೆ, ಭಾರತದಲ್ಲಿ ಕೊರೋನ ಕಾಯಿಲೆಗಿಂತ, ಅದನ್ನು ತಡೆಯುವ ಮುಂಜಾಗ್ರತೆಯ ದುಷ್ಪರಿಣಾಮಗಳಿಗೆ ಜನರು ತತ್ತರಿಸುತ್ತಿದ್ದಾರೆ. ವಿಶ್ವದಲ್ಲಿ ಕೊರೋನಕ್ಕೆ ಬಲಿಯಾಗುವವರ ಸಂಖ್ಯೆಗೆ ಹೋಲಿಸಿದರೆ ಭಾರತದಲ್ಲಿ ಅಂತಹ ಭೀಕರ ಪ್ರಮಾದಗಳು ನಡೆಯಲಾರವು. ಆದರೆ ಹಸಿವಿನಿಂದಾಗಿ ವಿಶ್ವದ ಯಾವುದೇ ದೇಶಗಳಲ್ಲಿ ನಡೆಯದಷ್ಟು ಸಾವು-ನೋವುಗಳು ಭಾರತದಲ್ಲಿ ನಡೆಯಲಿವೆ. ಈ ಕುರಿತಂತೆ ದೇಶ ವಿದೇಶಗಳ ವಿವಿಧ ಆರ್ಥಿಕ ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಕೊರೋನೋತ್ತರ ಜಗತ್ತಿನಲ್ಲಿ ಹಸಿವು ಮತ್ತು ಬಡತನ ಭಾರೀ ಪ್ರಮಾಣದಲ್ಲಿ ಹೆಚ್ಚಲಿದೆ ಎಂದು ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಸಿದೆ. ಈ ಹಸಿವು ಮತ್ತು ಬಡತನದ ನೇರ ಪರಿಣಾಮವನ್ನು ಅನುಭವಿಸಲಿರುವುದು ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಎನ್ನುವುದನ್ನು ಪ್ರತ್ಯೇಕ ವಿವರಿಸಬೇಕಾಗಿಲ್ಲ. ಸದ್ಯದ ಸಂದರ್ಭದಲ್ಲಿ ಭಾರತ ಕೊರೋನ ದುಷ್ಪರಿಣಾಮಕ್ಕೆ ಮಹತ್ವ ನೀಡಿದಷ್ಟೇ, ಆರ್ಥಿಕ ದುಷ್ಪರಿಣಾಮಗಳ ಕಡೆಗೂ ಮಹತ್ವ ನೀಡಬೇಕು. ಇಲ್ಲವಾದರೆ ಕೊರೋನ ಸೃಷ್ಟಿಸುವ ಸಾವು ನೋವುಗಳ ಹಲವು ಪಟ್ಟು ಸಾವು-ನೋವುಗಳು ಹಸಿವಿನಿಂದ ಸಂಭವಿಸಲಿವೆ. ಇದು ಭಾರತದಲ್ಲಿ ಕ್ಷಯದಂತಹ ಕಾಯಿಲೆಗಳನ್ನು ಇನ್ನಷ್ಟು ಭೀಕರಗೊಳಿಸಲಿದೆ.

ಭಾರತ ಇಂದು ಭದ್ರತೆ ಮತ್ತು ಅಭದ್ರತೆಯ ನಡುವೆ ತೊಯ್ದಿಡುತ್ತಿದೆ. ಒಂದೆಡೆ ಕೊರೋನ ಹರಡದಂತೆ ಹಮ್ಮಿಕೊಳ್ಳುತ್ತಿರುವ ಭದ್ರತೆ, ಇನ್ನೊಂದೆಡೆ ಈ ಭದ್ರತೆ ಸೃಷ್ಟಿಸುತ್ತಿರುವ ಆರ್ಥಿಕ ಮತ್ತು ಆಹಾರ ಅಭದ್ರತೆ, ಇವುಗಳನ್ನು ಸಂಭಾಳಿಸುವುದರಲ್ಲಿ ಭಾರತ ಸಂಪೂರ್ಣ ವಿಫಲವಾಗುತ್ತಿದೆ. ಪಡಿತರ ವಿತರಣೆ ವ್ಯವಸ್ಥೆಯಡಿ ಹಸಿವನ್ನು ಸಮದೂಗಿಸಲು ಸರಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ, ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಕೇಂದ್ರ ಸರಕಾರವು ಪಡಿತರ ವಿತರಣೆ ವ್ಯವಸ್ಥೆಯಡಿ ದೇಶದ 80 ಕೋಟಿಗೂ ಅಧಿಕ ಫಲಾನುಭವಿಗಳಿಗೆ ತಲಾ 5 ಕಿಲೋಗ್ರಾಂ ಅಕ್ಕಿ ಅಥವಾ ಗೋಧಿಯನ್ನು ಪೂರೈಕೆ ಮಾಡುವುದಾಗಿ ಘೋಷಿಸಿದೆ. ಆದರೆ ಪಡಿತರ ವಿತರಣಾ ವ್ಯವಸ್ಥೆಯ ಹೊರಗಿರುವ ಒಂದು ದೊಡ್ಡ ಜನಸಮೂಹವು, ತನ್ನನ್ನು ಈ ವ್ಯಾಪ್ತಿಯಲ್ಲಿ ಸೇರಿಸಿಕೊಳ್ಳಿ ಎಂದು ಕೂಗುತ್ತಿದೆ. ಸರಕಾರ ಜಾಣ ಕಿವುಡು ನಟಿಸುತ್ತಿದೆ. ಭಾರತದಂತಹ ದೇಶದಲ್ಲಿ ಕೊರೋನ ಬಿಪಿಎಲ್-ಎಪಿಲ್ ಕಾರ್ಡ್‌ಗಳ ನಡುವಿನ ಅಂತರವನ್ನು ಇಲ್ಲವಾಗಿಸಿದೆ. ಆದುದರಿಂದಲೇ, ಪಡಿತರ ವಿತರಣಾ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕೆಂಬ ಕೂಗು ಇತ್ತೀಚಿನ ದಿನಗಳಲ್ಲಿ ಬಲವಾಗಿ ಕೇಳಿಬರುತ್ತಿದೆ. ಕೊರೋನ ಹಾವಳಿ ನಿಯಂತ್ರಿಸಲು ಲಾಕ್‌ಡೌನ್ ಹೇರಲಾಗಿರುವುದರಿಂದ ಲಕ್ಷಾಂತರ ಮಂದಿ ದಿನಗೂಲಿ ಕಾರ್ಮಿಕರು ಉದ್ಯೋಗ ಕಳೆದುಕೊಂಡು, ಸಂಪಾದನೆಯಿಲ್ಲದೆ ಕಂಗಾಲಾಗಿದ್ದಾರೆ. ಇಂತಹ ಕಠಿಣ ಸನ್ನಿವೇಶದಲ್ಲಿ ಪಡಿತರ ಚೀಟಿಯಿಲ್ಲದಿದ್ದರೂ, ಅಗತ್ಯವಿರುವ ಎಲ್ಲರಿಗೂ ಆಹಾರಧಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡಬೇಕೆಂದು ಕೇಂದ್ರ ಸರಕಾರವನ್ನು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞರಾದ ಅಮರ್ತ್ಯಸೇನ್ ಹಾಗೂ ಅಭಿಜಿತ್ ಬ್ಯಾನರ್ಜಿ, ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್, ಹಿರಿಯ ಅರ್ಥಶಾಸ್ತ್ರಜ್ಞ ಜೀನ್ ಡ್ರೇಝ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಈಗಾಗಲೇ ಆಗ್ರಹಿಸಿದ್ದಾರೆ.

        ಗ್ರಾಮಾಂತರ ಪ್ರದೇಶಗಳ ಶೇ.75 ಮಂದಿ ಹಾಗೂ ನಗರಪ್ರದೇಶಗಳ ಶೇ.50 ಮಂದಿ ಸೇರಿದಂತೆ ಭಾರತದ ಒಟ್ಟು ಜನಸಂಖ್ಯೆಯ ಶೇ.67ರಷ್ಟು ಮಂದಿಯನ್ನು ಪಡಿತರ ವ್ಯವಸ್ಥೆ ವ್ಯಾಪ್ತಿಗೆ ಒಳಪಡಿಸಬೇಕೆಂದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ಪ್ರತಿಪಾದಿಸಿದೆ. ಆದರೆ ಈ ಗುರಿಯನ್ನು ತಲುಪಲು ಸರಕಾರಕ್ಕೆ ಸಾಧ್ಯವಾಗಿಲ್ಲ. 2011ರಲ್ಲಿ ಸುಮಾರು 121 ಕೋಟಿಯಷ್ಟಿದ್ದ ಭಾರತದ ಜನಸಂಖ್ಯೆ 2018ರಲ್ಲಿ 137 ಕೋಟಿಗೆ ತಲುಪಿದ್ದು, ಅಂದಾಜು 16 ಕೋಟಿ ಏರಿಕೆಯಾಗಿದೆ. ಇದೀಗ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ದೇಶದ ಒಟ್ಟು ಜನಸಂಖ್ಯೆಯ ಶೇ.67 ಅಂದರೆ 92 ಕೋಟಿ ಮಂದಿಯನ್ನು ಪಡಿತರ ವ್ಯವಸ್ಥೆಗೊಳಪಡಿಸಬೇಕೆಂದು ಬಯಸಿದೆ. ಆದರೆ ಈ ಕಾಯ್ದೆಯು 2013ರಲ್ಲಿ ಜಾರಿಗೆ ಬಂದಾಗ ದೇಶದ ಒಟ್ಟು ಜನಸಂಖ್ಯೆಯ 81.03 ಕೋಟಿ ಮಂದಿ ಮಾತ್ರ ಪಡಿತರ ವ್ಯವಸ್ಥೆಯಡಿ ಬಂದಿದ್ದರು. ಅಂದರೆ ಇನ್ನೂ 10.07 ಕೋಟಿ ಮಂದಿ ಪಡಿತರ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆಂದಾಯಿತು. ಅಂದಹಾಗೆ ಆಹಾರಭದ್ರತಾ ಕಾಯ್ದೆಯ ವ್ಯಾಪ್ತಿಗೆ ಬಾರದವರಲ್ಲಿ ಗಣನೀಯ ಸಂಖ್ಯೆಯ ಮಂದಿ ಅತ್ಯಂತ ದುರ್ಬಲವರ್ಗಗಳಿಗೆ ಸೇರಿದವರಾಗಿದ್ದಾರೆ.

ಭಾರತದ ಶೇ.51ರಷ್ಟು ಕಾರ್ಮಿಕರು ಮಾಸಿಕವಾಗಿ 5 ಸಾವಿರಕ್ಕೂ ಕಡಿಮೆ ಸಂಪಾದನೆಯುಳ್ಳವರೆಂದು ಅಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು 2018ರಲ್ಲಿ ಪ್ರಕಟಿಸಿದ ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ಅಂದರೆ ಈ ಕಾರ್ಮಿಕರು ದಿನಕ್ಕೆ 167 ರೂ.ಗಿಂತಲೂ ಕಡಿಮೆ ಸಂಪಾದಿಸುತ್ತಾರೆ.ಇದೀಗ ಕೊರೋನ ವೈರಸ್ ಅಟ್ಟಹಾಸಕ್ಕೆ ಕಡಿವಾಣ ಹಾಕಲು ದೇಶಾದ್ಯಂತ ಲಾಕ್‌ಡೌನ್ ಹೇರಿರುವುದರಿಂದ, ದೇಶದ ಅತಿ ದೊಡ್ಡ ಸಂಖ್ಯೆಯ ಕಾರ್ಮಿಕರು ದುಡಿಮೆ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಬಿಡಿಗಾಸಿನ ಸಂಪಾದನೆಯೂ ಇಲ್ಲದ ಅವರ ಮುಂದಿರುವ ಸವಾಲು ಕೊರೋನ ಅಲ್ಲ, ಹಸಿವು.

ಲಾಕ್‌ಡೌನ್‌ನಿಂದಾಗಿ ವಲಸಿಗ ಕಾರ್ಮಿಕರು ಅತ್ಯಂತ ದಯನೀಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಲಾಕ್‌ಡೌನ್ ಆರಂಭಗೊಂಡ ಮರುದಿನ ಅಂದರೆ ಮಾರ್ಚ್ 27ರಂದು, ಸ್ವಾನ್ ಎಂಬ ಸಂಘಟನೆಯ 73 ಕಾರ್ಯಕರ್ತರು ಸಮೀಕ್ಷೆಗೆ ಒಳಪಡಿಸಿದ 11 ಸಾವಿರ ಕಾರ್ಮಿಕರ ಪೈಕಿ ಶೇ.50ರಷ್ಟು ಮಂದಿಯಲ್ಲಿ ಒಂದು ದಿನಕ್ಕೂ ಸಾಕಾಗುವಷ್ಟು ಆಹಾರಧಾನ್ಯ ಉಳಿದಿರಲಿಲ್ಲ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ವಲಸಿಗ ಕಾರ್ಮಿಕರಲ್ಲಿ ಶೇ.96 ಮಂದಿಗೆ ಸರಕಾರದಿಂದ ಯಾವುದೇ ಪಡಿತರ ದೊರೆತಿಲ್ಲ ಹಾಗೂ ಅವರಲ್ಲಿ ಶೇ.70 ಮಂದಿಗೆ ಬೇಯಿಸಿದ ಆಹಾರ ದೊರೆತಿಲ್ಲವೆಂಬುದಾಗಿಯೂ ಈ ವರದಿಯು ತಿಳಿಸಿದೆ. ಅಷ್ಟು ಮಾತ್ರವೇ ಅಲ್ಲ, ಶೇ.89ರಷ್ಟು ವಲಸಿಗ ಕಾರ್ಮಿಕರಿಗೆ ಅವರ ಮಾಲಕರು ಲಾಕ್‌ಡೌನ್ ಅವಧಿಯಲ್ಲಿ ಚಿಕ್ಕಾಸೂ ಹಣವನ್ನು ನೀಡಿಲ್ಲವೆಂದೂ ಸಮೀಕ್ಷೆಯಿಂದ ಗೊತ್ತಾಗಿದೆ. ಇನ್ನೊಂದೆಡೆ ದೇಶದೆಲ್ಲೆಡೆ ಕುಟುಂಬಗಳ ಆದಾಯದಲ್ಲಿಯೂ ತೀವ್ರ ಕುಸಿತವುಂಟಾಗಿದೆ. ಮಾರ್ಚ್ 15ರಂದು ಶೇ.28ರಷ್ಟಿದ್ದ ಕುಟುಂಬಗಳ ಆದಾಯವು ಎಪ್ರಿಲ್ 12ರ ಹೊತ್ತಿಗೆ 10 ಶೇ.ಕ್ಕೆ ಇಳಿದಿದ್ದು, ದೇಶದ ಜನಸಂಖ್ಯೆ ಅತ್ಯಂತ ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ಸ್ಪಷ್ಟವಾಗಿದೆ.

ಹಾಗೆಂದು ಈ ಜನರ ಹಸಿವನ್ನು ಇಂಗಿಸುವಷ್ಟು ಆಹಾರ ಭಾರತದ ಗೋದಾಮುಗಳಲ್ಲಿ ಇಲ್ಲ ಎಂದಲ್ಲ. ಮಾರ್ಚ್‌ನಲ್ಲಿ ಭಾರತೀಯ ಆಹಾರ ನಿಗಮವು ಅಕ್ಕಿ ಹಾಗೂ ಗೋಧಿ ಸೇರಿದಂತೆ 77 ದಶಲಕ್ಷ ಟನ್ ಆಹಾರಧಾನ್ಯಗಳನ್ನು ಸಂಗ್ರಹಿಸಿಟ್ಟಿದ್ದು, ಇದು ಅಗತ್ಯವಿರುವ ದಾಸ್ತಾನಿನ ಪ್ರಮಾಣಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ಇದರ ಜೊತೆಗೆ ಹಾಲಿ ಋತುವಿನಲ್ಲಿ ಇನ್ನೂ 40 ದಶಲಕ್ಷ ಟನ್ ಆಹಾರ ಧಾನ್ಯಗಳನ್ನು ಅದು ಖರೀದಿಸಲಿದೆ.ಒಂದು ವೇಳೆ ಪ್ರತಿ ತಿಂಗಳು ದೇಶದ 110 ಕೋಟಿ ಜನಸಂಖ್ಯೆಗೆ ತಲಾ 10 ಕಿಲೋಗ್ರಾಂ ಆಹಾರಧಾನ್ಯವನ್ನು , ಸುಮಾರು ಆರು ತಿಂಗಳವರೆಗೆ ಒದಗಿಸಬೇಕಾದರೆ ನಮ್ಮ ಬಳಿ 66 ದಶಲಕ್ಷ ಟನ್ ಧಾನ್ಯಗಳು ಇರಬೇಕಾಗುತ್ತದೆ. ಇದು ಈಗಾಗಲೇ ಸರಕಾರದ ಬಳಿ ಇರುವ ದಾಸ್ತಾನಿನ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ಅಷ್ಟೇ ಅಲ್ಲ ಒಂದು ವೇಳೆ ಕೇಂದ್ರ ಸರಕಾರವು ಈ ಋತುವಿನಲ್ಲಿ ಅಂದಾಜು 11.70 ಲಕ್ಷ ಟನ್ ಆಹಾರಧಾನ್ಯವನ್ನು ಖರೀದಿಸಿದ್ದೇ ಆದಲ್ಲಿ, ದಾಸ್ತಾನು ಪ್ರಮಾಣವು ಇನ್ನೂ ಹೆಚ್ಚಲಿದೆ. ಹೀಗಿರುವಾಗ ಮುಂದಿನ ಆರು ತಿಂಗಳವರೆಗಾದರೂ,ಅಗತ್ಯವುಳ್ಳವರಿಗೆ ಆಹಾರಧಾನ್ಯ ಪೂರೈಕೆ ಮಾಡಲು ಕೇಂದ್ರ ಸರಕಾರಕ್ಕೆ ಯಾವುದೇ ತೊಂದರೆಯಾಗದು. ಮೊತ್ತ ಮೊದಲು, ಕೊರೋನದ ಭಯವಿಲ್ಲದೆ ಹಸಿವಿನ ಭಯದಿಂದ ಕಂಗೆಟ್ಟು ಬೀದಿಯಲ್ಲಿ ನಿಂತಿರುವ ಕಾರ್ಮಿಕ ವರ್ಗ ಮತ್ತು ಲಾಕ್‌ಡೌನ್ ಮುಗಿಯುವ ದಿನಗಳಿಗಾಗಿ ಕತ್ತು ಉದ್ದ ಮಾಡಿ ಕಾಯುತ್ತಿರುವ ಮಧ್ಯಮವರ್ಗ ಭಾರತದ ಅಭಿವೃದ್ಧಿಯ ಭಾಗವಾಗಿದ್ದಾರೆ ಎನ್ನುವುದನ್ನು ಸರಕಾರ ತನಗೆ ತಾನೇ ಸ್ಪಷ್ಟ ಪಡಿಸಿಕೊಳ್ಳಬೇಕು. ಕಾರ್ಪೊರೇಟ್ ಶಕ್ತಿಗಳಿಗೆ ಮಿಡಿದಂತೆಯೇ, ಈ ವರ್ಗದ ಜನರಿಗಾಗಿ ಮಿಡಿಯುವ ಹೃದಯವನ್ನು ಸರಕಾರ ಹೊಂದಿದ್ದೇ ಆದಲ್ಲಿ ಪರಿಹಾರದ ಮಾರ್ಗ ತನ್ನಷ್ಟಕ್ಕೇ ತೆರೆದುಕೊಳ್ಳುತ್ತದೆ. ಭಾರತದಲ್ಲಿ ಹಸಿವು ಕೊರೋನಕ್ಕಿಂತ ಭೀಕರ ರೋಗವಾಗಿ ತನ್ನ ದುಷ್ಪರಿಣಾಮಗಳನ್ನು ಬೀರುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X