ಖ್ಯಾತ ಬರಹಗಾರ, ರಂಗತಜ್ಞ ಚಂದ್ರಕಾಂತ ಕುಸನೂರು ನಿಧನ

ಬೆಂಗಳೂರು, ಎ.19: ಖ್ಯಾತ ಬರಹಗಾರ, ರಂಗತಜ್ಞ ಮತ್ತು ಕಲಾವಿದರಾದ ಚಂದ್ರಕಾಂತ ಕುಸನೂರು(90) ಅವರು ಶನಿವಾರ ರಾತ್ರಿ ಬೆಳಗಾವಿಯಲ್ಲಿ ನಿಧನರಾದರು.
ಚಂದ್ರಕಾಂತ ಕುಸನೂರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ರವಿವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಶಾಹಪುರ ಸ್ಮಶಾನ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿಸಲಾಯಿತು.
ಕುಟುಂಬ ವರ್ಗದವರು, ಸಾಹಿತಿಗಳು, ಒಡನಾಡಿಗಳು, ಚಿತ್ರಕಲಾವಿದ ಬಾಳು ಸದಲಗೆ, ಸಾಹಿತಿಗಳಾದ ಶಿರೀಶ ಜೋಶಿ, ಬಿ.ಕೆ. ಕುಲಕರ್ಣಿ, ಬ್ಯಾಂಕ್‍ನ ನಿವೃತ್ತ ಅಧಿಕಾರಿ ರಘುನಾಥ ಮುತಾಲಿಕ, ಮಾಜಿ ನಗರ ಸೇವಕಿ ಶೀಲಾ ದೇಶಪಾಂಡೆ ಮತ್ತು ನಾಗರಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು. ಚಂದ್ರಕಾಂತ ಕುಸನೂರ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.
1931ರಲ್ಲಿ ಕಲಬುರಗಿ ಜಿಲ್ಲೆಯ ಕುಸನೂರಲ್ಲಿ ಜನಿಸಿದ ಚಂದ್ರಕಾಂತ್ ಕುಸನೂರು ಅವರು ಎಂಎ, ಬಿ.ಇಡಿ ಪದವಿ ಪೂರೈಸಿದ್ದಾರೆ. ಕಲಬುರಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ರಂಗಕರ್ಮಿಯೂ ಆಗಿದ್ದ ಅವರು ರಂಗ ಮಾಧ್ಯಮ ನಾಟಕ ಸಂಸ್ಥೆ ಹುಟ್ಟು ಹಾಕಿದ್ದರು.
1975ರಲ್ಲಿ ಅವರ ಯಾತನಾ ಶಿಬಿರ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿಯ ಪುರಸ್ಕಾರ ಲಭಿಸಿದೆ. 1992ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಗೌರವ ಪ್ರಶಸ್ತಿ ನೀಡಲಾಗಿದೆ. 2006ನೆ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ. 2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಲಲಿತಕಲಾ ಅಕಾಡಮಿಗಳಿಂದ ಪುಸ್ತಕ ಬಹುಮಾನ ಬಂದಿವೆ. ಮೂರು ಅಕಾಡಮಿಗಳ ಗೌರವ ಪ್ರಶಸ್ತಿಗಳೂ ಬಂದಿವೆ.
ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು, ಇವರು ಚಿಕ್ಕಪ್ಪನ ಮನೆಯಲ್ಲಿದ್ದು ಓದಿದರು. ಅಸಂಗತ ನಾಟಕಗಳ ರಚನೆ, ಪಾಶ್ಚಾತ್ಯ ಸಾಹಿತ್ಯದ ವಿಪುಲ ಓದಿನಿಂದಾಗಿ ಕುಸನೂರರ ಬರವಣಿಗೆ ಹೊಸ ಮೆರುಗು ಪಡೆಯಿತು.
ನವ್ಯ ಸಾಹಿತ್ಯದ ಸಂದರ್ಭದಲ್ಲಿ ಗಮನಾರ್ಹ ಎನಿಸಿತು. ಕುಸನೂರು ಅವರು ಹಲವು ಭಾಷೆಗಳಲ್ಲಿ ಪಾಂಡಿತ್ಯವನ್ನು ಗಳಿಸಿದ್ದರು. ಮರಾಠಿಯಲ್ಲಿ ಕವಿತೆ, ಕಥೆ ಬರೆದಿದ್ದಾರೆ. ಅನಂತಮೂರ್ತಿಯವರ ಸಂಸ್ಕಾರ, ಆಲನಹಳ್ಳಿಯವರ ಕಾಡು ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ.







