ನೈರ್ಮಲ್ಯ ಜಾಗೃತಿಗಾಗಿ ಮತ್ತೆ ದಂಡದ ಮೊರೆ ಹೋದ ಬಿಬಿಎಂಪಿ

ಬೆಂಗಳೂರು, ಎ.19: ಕೊರೋನ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಜನರಲ್ಲಿ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿರುವ ಬಿಬಿಎಂಪಿ ಮತ್ತೆ ದಂಡದ ಮೊರೆ ಹೋಗಿದೆ. ಕಂಡಕಂಡಲ್ಲಿ ಉಗುಳಿದರೆ ಒಂದು ಸಾವಿರ ರೂ. ದಂಡ, ರಸ್ತೆ ಬದಿ, ರಾಜಕಾಲುವೆಗಳಿಗೆ ಕಸ ಎಸೆದರೆ 2 ಸಾವಿರ ರೂ. ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.
ನಗರದಲ್ಲಿ ಮಾಂಸದ ಅಂಗಡಿಗಳು ತೆರೆದಿರುವುದರಿಂದ ಅಂಗಡಿಯವರು ಮಾಂಸ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅವರಿಗೆ ದಂಡ ವಿಧಿಸುತ್ತಿದೆ. ಆರಂಭಿಕವಾಗಿ ಕೋಳಿ ತ್ಯಾಜ್ಯವನ್ನು ರಸ್ತೆ ಬದಿ ಎಸೆದ ಹಿನ್ನೆಲೆಯಲ್ಲಿ ಓರ್ವರಿಗೆ ಎರಡು ಸಾವಿರ ದಂಡ ವಸೂಲಿ ಮಾಡಿದೆ.
ದಂಡ ವಿಧಿಸುವ ಕುರಿತಂತೆ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಉಗುಳುವ ಹಾಗೂ ಕಸ ಎಸೆಯುವುದಕ್ಕೆ ಸಂಬಂಧಿಸಿದಂತೆ ದಂಡ ವಿಧಿಸುವ ಯೋಜನೆಯನ್ನು ಜಾರಿಗೆ ತಂದು ಎರಡು ದಿನಗಳಾಗಿವೆ. ಆದರೆ, ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ಹಾಗೂ ವಾಣಿಜ್ಯ ವಹಿವಾಟು ಕೂಡಾ ಸ್ಥಗಿತವಾಗಿರುವುದರಿಂದ ಕಸದ ಪ್ರಮಾಣ ಕಡಿಮೆಯಾಗಿದೆ. ಮನೆಗಳಿಂದ ಪ್ರತಿದಿನ ಕಡ್ಡಾಯವಾಗಿ ಕಸ ಸಂಗ್ರಹಿಸುತ್ತಿರುವುದರಿಂದ ರಸ್ತೆ ಬದಿಯ ಕಸವೂ ಕಡಿಮೆಯಾಗಿದೆ. ಲಾಕ್‍ಡೌನ್ ತೆರವಾದ ನಂತರ ದಂಡ ಪ್ರಯೋಗ ಮಾಡಲು ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.







