ಸರಕಾರದ ನಿರ್ಧಾರದ ಬಳಿಕವಷ್ಟೇ ವಿಮಾನಯಾನ ಟಿಕೆಟ್ ಬುಕ್ಕಿಂಗ್ ಆರಂಭಿಸಿ: ಕೇಂದ್ರದ ಸಲಹೆ

ಹೊಸದಿಲ್ಲಿ, ಎ.19: ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸಂಚಾರ ಪುನರಾರಂಭಿಸಲು ಸರಕಾರ ನಿರ್ಧರಿಸಿದ ಬಳಿಕವಷ್ಟೇ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಆರಂಭಿಸುವಂತೆ ಕೇಂದ್ರ ಸರಕಾರ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಿದೆ.
ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣ ಪುನರಾರಂಭಿಸುವ ಬಗ್ಗೆ ಇದುವರೆಗೆ ಕೇಂದ್ರ ಸರಕಾರ ನಿರ್ಧರಿಸಿಲ್ಲ . ಕೇಂದ್ರ ಸರಕಾರದ ನಿರ್ಧಾರ ಹೊರಬಿದ್ದ ಬಳಿಕವಷ್ಟೇ ವಿಮಾನಯಾನ ಸಂಸ್ಥೆಗಳು ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಆರಂಭಿಸುವಂತೆ ಸಲಹೆ ನೀಡಿದ್ದೇವೆ ಎಂದು ನಾಗರಿಕ ವಿಮಾನಯಾನ ಇಲಾಖೆಯ ಸಚಿವ ಹರ್ದೀಪ್ಸಿಂಗ್ ಪುರಿ ಹೇಳಿದ್ದಾರೆ.
ಜೂನ್ 1ರಿಂದ ಅಂತರಾಷ್ಟ್ರೀಯ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಮತ್ತು ಮೇ 4ರಿಂದ ದೇಶೀಯ ವಿಮಾನ ಪ್ರಯಾಣದ ಟಿಕೆಟ್ ಬುಕಿಂಗ್ ಆರಂಭಿಸುವುದಾಗಿ ಸರಕಾರಿ ಸ್ವಾಮ್ಯದ ಏರಿಂಡಿಯಾ ವಿಮಾನಯಾನ ಸಂಸ್ಥೆ ಘೋಷಿಸಿದ ಬಳಿಕ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಮಾರ್ಚ್ 25ರಿಂದ ಎಪ್ರಿಲ್ 14ರವರೆಗೆ ದೇಶದಲ್ಲಿ ಪ್ರಥಮ ಹಂತದ ಲಾಕ್ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ನಿಷೇಧಿಸಲಾಗಿತ್ತು. ಬಳಿಕ ಸರಕಾರ ಲಾಕ್ಡೌನ್ ಅನ್ನು ಮೇ 3ರವರೆಗೆ ವಿಸ್ತರಿಸಿದೆ. ಆದರೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ ಅನುಮತಿ ಪಡೆದು ಸರಕು ಸಾಗಿಸುವ ವಿಮಾನ ಹಾಗೂ ವಿಶೇಷ ವಿಮಾನಗಳು ಸಂಚರಿಸಬಹುದಾಗಿದೆ.