ಆತಂಕಕಾರಿ ಪ್ರಮಾಣದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರಿಕೆ
ಹೊಸದಿಲ್ಲಿ, ಎ.20: ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ರವಿವಾರ ದೊಡ್ಡ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಭಾರತದಲ್ಲಿ ಗರಿಷ್ಠ ಸಂಖ್ಯೆಯ ಪ್ರಕರಣಗಳು (1,612) ರವಿವಾರ ದೃಢಪಟ್ಟಿವೆ. ಮಹಾರಾಷ್ಟ್ರ (552), ಗುಜರಾತ್ (367) ಮತ್ತು ಉತ್ತರ ಪ್ರದೇಶ (179) ರಾಜ್ಯಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ದೇಶದಲ್ಲಿ ಒಂದೇ ದಿನ ಸೋಂಕಿತರ ಸಂಖ್ಯೆ ಶೇಕಡ 10ರಷ್ಟು ಹೆಚ್ಚಿ, 17,325ನ್ನು ತಲುಪಿದೆ.
ಮಹಾರಾಷ್ಟ್ರದಲ್ಲಿ 12 ಮಂದಿ ಕೊರೋನ ಸೋಂಕಿತರು ಮೃತಪಟ್ಟಿದ್ದು, ಗುಜರಾತ್ (10), ಮಧ್ಯಪ್ರದೇಶ (5), ತೆಲಂಗಾಣ (3) ದಿಲ್ಲಿ, ಕೇರಳ, ರಾಜಸ್ಥಾನ ಹಾಗೂ ಕರ್ನಾಟಕದಲ್ಲಿ ತಲಾ 2 ಸಾವು ಸಂಭವಿಸಿದ್ದು, 39 ಮಂದಿ ರವಿವಾರ ಜೀವ ಕಳೆದುಕೊಂಡಿದ್ದು, ಮೃತಪಟ್ಟ ಸೋಂಕಿತರ ಸಂಖ್ಯೆ 560ಕ್ಕೇರಿದೆ.
ಈ ಮಧ್ಯೆ ಗೋವಾದಲ್ಲಿ ಏಳನೇ ವ್ಯಕ್ತಿ ಕೂಡಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ದೇಶದ ಮೊಟ್ಟಮೊದಲ ಕೊರೋನ ವೈರಸ್ ಮುಕ್ತ ರಾಜ್ಯ ಎನಿಸಿಕೊಂಡಿದೆ.
ದಿಲ್ಲಿಯಲ್ಲಿ ರವಿವಾರ 110 ಹೊಸ ಪ್ರಕರಣಗಳು ಬೆಳಕಿಗೆ ಬರುವುದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2,003ಕ್ಕೇರಿದೆ. ಒಡಿಶಾದಲ್ಲಿ 60 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಕೊರೋನ ವಿರುದ್ಧದ ಹೋರಾಟದ ಅಂಗವಾಗಿ ಸರಪಂಚರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರವನ್ನು ರಾಜ್ಯ ಸರ್ಕಾರ ನೀಡಿದೆ.
ಮುಂಬೈ ನಗರದಲ್ಲಿ ಒಂದೇ ದಿನ 456 ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಮೃತಪಟ್ಟವರ ಪ್ರಮಾಣ ಕೂಡಾ ರಾಜ್ಯದಲ್ಲಿ ಶೇಕಡ 4.8ರಷ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಒಟ್ಟು 4,200 ಪ್ರಕರಣಗಳು ದೃಢಪಟ್ಟಿದ್ದು, 223 ಮಂದಿ ಮೃತಪಟ್ಟಿದ್ದಾರೆ. ಗುಜರಾತ್ನಲ್ಲಿ 1743 ಮಂದಿಗೆ ಸೋಂಕು ತಗುಲಿದ್ದು, ಮಹಾರಾಷ್ಟ್ರ ಹಾಗೂ ದಿಲ್ಲಿ ಬಳಿಕ ಗರಿಷ್ಠ ಸಂಖ್ಯೆಯ ಸೋಂಕಿತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ (72) ಬಳಿಕ ಸಾವಿನ ಸಂಖ್ಯೆಯಲ್ಲೂ ಗುಜರಾತ್ ಮೂರನೇ ಸ್ಥಾನದಲ್ಲಿದೆ.