ಹುಷಾರ್... ಬೊಜ್ಜು ಸಮಸ್ಯೆ ಕೊರೋನ ಸೋಂಕಿಗೂ ಕಾರಣವಾದೀತು!
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.20: ಸಾಮಾನ್ಯವಾಗಿ ಮಧುಮೇಹ ಮತ್ತು ಹೈಪರ್ ಟೆನ್ಷನ್ ಸಮಸ್ಯೆಗೆ ಕಾರಣ ಎಂದು ನಂಬಲಾದ ಬೊಜ್ಜಿನ ಸಮಸ್ಯೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ತೀವ್ರತರ ಕೋವಿಡ್-19 ಸೋಂಕಿಗೂ ಕಾರಣವಾಗಬಲ್ಲದು ಎಂಬ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರೋಗಿಗಳ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅಂದಾಜಿಸುವ ಸಲುವಾಗಿ ರೋಗಿಯ ಎತ್ತರ ಮತ್ತು ತೂಕದ ಮಾಹಿತಿಯನ್ನು ಕೂಡಾ ಕಡ್ಡಾಯಪಡಿಸುವಂತೆ ಡಬ್ಲ್ಯುಎಚ್ಒ ಮತ್ತು ಐಸಿಎಂಆರ್ಗೆ ವೈದ್ಯರು ಶಿಫಾರಸು ಮಾಡಿದ್ದಾರೆ.
ಕರೆಂಟ್ ಸೈನ್ಸ್ ನಿಯತಕಾಲಿಕದಲ್ಲಿ ಬೊಜ್ಜು ಸಮಸ್ಯೆ ಇರುವ ಯುವಕರಿಗೆ ಕೋವಿಡ್-19 ಸೋಂಕು ಹರಡುವ ಅಪಾಯ ಸಾಧ್ಯತೆಯ ಅಂಶವನ್ನು ಪ್ರಕಟಿಸಲಾಗಿದೆ. ಬ್ರಿಟನ್ನಲ್ಲಿ ಅಧಿಕ ತೂಕ ಮತ್ತು ಬೊಜ್ಜಿನ ಸಮಸ್ಯೆ ಇರುವವರಿಗೆ ಅಧಿಕ ಪ್ರಮಾಣದಲ್ಲಿ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಈ ಬಗ್ಗೆ ಎಚ್ಚರಿಕೆ ನೀಡಿದೆ. ಬ್ರಿಟನ್ನ 286 ಎಚ್ಎಚ್ಎಸ್ ತೀವ್ರ ನಿಗಾ ಘಟಕಗಳಿಗೆ ದಾಖಲಿಸಲ್ಪಟ್ಟ 2,204 ಕೋವಿಡ್-19 ಸೋಂಕಿತರ ಪೈಕಿ ಶೇಕಡ 73ರಷ್ಟು ಮಂದಿ ಅಧಿಕ ದೇಹತೂಕ ಹೊಂದಿದ್ದರು ಅಥವಾ ಬೊಜ್ಜು ದೇಹ ಹೊಂದಿದ್ದರು ಎಂದು ವಿವರಿಸಲಾಗಿದೆ. ಫ್ರಾನ್ಸ್ನಲ್ಲಿ ಕೂಡಾ ವೆಂಟಿಲೇಟರ್ ಅವಶ್ಯಕತೆ ಇರುವ ಬಹುತೇಕ ರೋಗಿಗಳು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮತ್ತೊಂದು ಅಧ್ಯಯನ ಹೇಳಿದೆ.
ನ್ಯೂಯಾರ್ಕ್ನಲ್ಲಿ ದಾಖಲಾದ 4,000 ಕೋವಿಡ್-19 ರೋಗಿಗಳ ಮಾಹಿತಿ ವಿಶ್ಲೇಷಿಸಿದಾಗ ಕೂಡಾ ಬೊಜ್ಜು ಪ್ರಮುಖ ಅಪಾಯ ಸಾಧ್ಯತೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಅಧ್ಯಯನ ತಂಡದಲ್ಲಿದ್ದ ಮಂಗಳೂರಿನ ಯೆನೆಪೊಯ ಸ್ವಾಯತ್ತ ವಿವಿಯ ಮೆಡಿಸಿನ್ ವಿಭಾಗದ ಪ್ರೊಫೆಸರ್ ಮತ್ತು ಪೌಷ್ಟಿಕಾಂಶ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಅನುರಾಗ್ ಭಾರ್ಗವ, ಎಚ್1ಎನ್1 ಸೋಂಕಿನಂತೆ ಕೋವಿಡ್-19 ಸೋಂಕಿಗೂ ಬೊಜ್ಜಿನ ಸಮಸ್ಯೆ ಕಾರಣವಾಗಬಲ್ಲದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಬೊಜ್ಜು ಹೊಂದಿರುವವರಲ್ಲಿ ಅಧಿಕ ಪ್ರಮಾಣದ ಉರಿಯೂತದ ಲಕ್ಷಣಗಳು ವೈರಸ್ ದಾಳಿಗೆ ಮುನ್ನವೇ ಕಾಣಿಸಿಕೊಳ್ಳುತ್ತವೆ. ವೈರಸ್ ದಾಳಿ ಇದನ್ನು ಹೆಚ್ಚಿಸುತ್ತದೆ ಎಂದು ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಡಾ.ಶ್ರೀನಾಥ್ ರೆಡ್ಡಿ ಹೇಳುತ್ತಾರೆ.