ಕೊರೋನ: ರಾಜ್ಯದಲ್ಲಿ ಮತ್ತೆ ಇಬ್ಬರು ಬಾಲಕರ ಸಹಿತ ಐವರಲ್ಲಿ ಸೋಂಕು ಪತ್ತೆ

ಬೆಂಗಳೂರು, ಎ.20: ರಾಜ್ಯದಲ್ಲಿ ಇಬ್ಬರು ಬಾಲಕರು ಸೇರಿದಂತೆ ಮತ್ತೆ ಐದು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಈ ಐದು ಪ್ರಕರಣಗಳು ಕಲಬುರಗಿಯಲ್ಲಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 395ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಮಧ್ಯಾಹ್ನ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟಿನಲ್ಲಿ ರವಿವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯೊಳಗೆ ಐದು ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಲಾಗಿದೆ. ಕೊರೋನ ಸೋಂಕಿತರ ಸಂಪರ್ಕದಿಂದ ಈ ಐದು ಮಂದಿಗೂ ಸೋಂಕು ತಗಲಿದೆ. ಈ ಪೈಕಿ 13 ಮತ್ತು 17 ವರ್ಷದ ಇಬ್ಬರು ಬಾಲಕರು ಸೇರಿದ್ದಾರೆ. ಉಳಿದಂತೆ 19 ವರ್ಷದ ಯುವಕ, 30 ವರ್ಷದ ಯುವತಿ ಹಾಗೂ 50 ವರ್ಷದ ವ್ಯಕ್ತಿಯೋರ್ವರು ಸೇರಿದ್ದಾರೆ.
ರಾಜ್ಯದಲ್ಲಿ ಶುಕ್ರವಾರ ಶನಿವಾರ ಎರಡು ದಿನಗಳಲ್ಲಿ ಸೋಂಕಿರ ಸಂಖ್ಯೆಯಲ್ಲಿ ತೀವ್ರವಾದ ಏರಿಕೆ ಕಂಡುಬಂದಿತ್ತು. ಆದರೆ ರವಿವಾರ ಮತ್ತು ಇಂದು ಈ ಸಂಖ್ಯೆಯಲ್ಲಿ ಒಂದಿಷ್ಟು ಇಳಿಕೆ ಕಂಡುಬಂದಿರುವುದು ಸಮಾಧಾನಕರವಾಗಿದೆ.
ಕರ್ನಾಟಕದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 5 ಹೊಸ #Covid19 ಪ್ರಕರಣಗಳು ಖಚಿತವಾಗಿದ್ದು, ಒಟ್ಟಾರೆ ಸೊಂಕಿತರ ಸಂಖ್ಯೆ 395ಕ್ಕೆ ಏರಿದೆ. #ಮನೆಯಲ್ಲೇಇರಿ pic.twitter.com/dpWp03a1TU
— B Sriramulu (@sriramulubjp) April 20, 2020







