ಕೊರೋನ ನಡುವೆ ದ್ವೇಷದ ಹೇಳಿಕೆ: ಇಬ್ಬರು ಬಿಜೆಪಿ ಶಾಸಕರ ವಿರುದ್ಧ ಪ್ರಕರಣ
ಜೈಪುರ್ : ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರಕಾರ ಕೊರೋನವೈರಸ್ ಸಮಸ್ಯೆಯನ್ನು ನಿಭಾಯಿಸಿದ ರೀತಿಯನ್ನು ಟೀಕಿಸುವ ಭರದಲ್ಲಿ ದ್ವೇಷ ಕಾರುವ ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿದ ಆರೋಪದ ಮೇಲೆ ಸಂಗನೇರ್ ಬಿಜೆಪಿ ಶಾಸಕ ಅಶೋಕ್ ಲಹೋಟಿ ಹಾಗೂ ರಾಮಗಂಜ್ ಮಂಡಿ ಬಿಜೆಪಿ ಶಾಸಕ ಮದನ್ ದಿಲಾವರ್ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ವೈರಲ್ ವೀಡಿಯೋಗಳ ಮೂಲಕ ಇಬ್ಬರು ಶಾಸಕರೂ ದ್ವೇಷದ ಭಾವನೆ ಪಸರಿಸಲು ಯತ್ನಿಸಿದ್ದಾರೆಂಬ ಆರೋಪ ಅವರ ಮೇಲಿದೆ.
ರಾಜಸ್ಥಾನ ಇನ್ನೊಂದು ನ್ಯೂಯಾರ್ಕ್ ಆಗಬಹುದೆಂದು ಲಹೋಟಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರೆಂದು ಅವರ ವಿರುದ್ಧ ದೂರು ನೀಡಿದ್ದ ರಾಮಚಂದ್ರ ದೇವಂಡ ಎಂಬವರು ಆರೋಪಿಸಿದ್ದಾರೆ. ಆದರೆ ತಾವು ಸತ್ಯವನ್ನೇ ಹೇಳಿದ್ದಾಗಿ ಲಹೋಟಿ ಹೇಳಿಕೊಂಡಿದ್ದಾರೆ.
ಇನ್ನೊಬ್ಬ ಶಾಸಕ ಮದನ್ ವಿರುದ್ಧ ಸಂಜಯ್ ಶರ್ಮ ಎಂಬ ಕಾಂಗ್ರೆಸ್ ಕಾರ್ಯಕರ್ತ ದೂರು ನೀಡಿದ್ದರು. ರಾಜಸ್ಥಾನ ಸರಕಾರ ಪರಿಹಾರ ನೀಡುವಲ್ಲಿ ಒಂದು ನಿರ್ದಿಷ್ಟ ಸಮುದಾಯದ ಪರ ಇದೆ ಎಂದು ಮದನ್ ಆರೋಪಿಸಿದ್ದರೆಂದು ದೂರಿನಲ್ಲಿ ಹೇಳಲಾಗಿತ್ತು.
Next Story