ಹೊರರಾಜ್ಯದ ಮೀನು ವ್ಯಾಪಾರಕ್ಕೆ ಹಳೆಬಂದರಿನಲ್ಲಿ ವ್ಯವಸ್ಥೆ : ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ಎ.20: ಹೊರ ರಾಜ್ಯಗಳಿಂದ ಮಂಗಳೂರಿಗೆ ಲಾರಿಗಳ ಮೂಲಕ ಆಗಮಿಸುವ ಮೀನುಗಳನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಹಳೆಬಂದರಿನ ಒಂದು ಪಾರ್ಶ್ವದಲ್ಲಿ ಶನಿವಾರದಿಂದ ಅವಕಾಶ ನೀಡಲಾಗುವುದು. ಆದರೆ ಇಲ್ಲಿಗೆ ಸಾರ್ವಜನಿಕ ಪ್ರವೇಶ ಇಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಸ್ಪಷ್ಟಪಡಿಸಿದ್ದಾರೆ.
ಇಂದು ಬೆಳಗ್ಗೆ ಮೇಯರ್ ದಿವಾಕರ ಪಾಂಡೇಶ್ವರ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಗದೀಶ್ ಶೆಟ್ಟಿ, ಪೂರ್ಣಿಮಾ, ಸದಸ್ಯರಾದ ಅಬ್ದುಲ್ ಲತೀಫ್ ಜತೆ ಹಳೆ ಬಂದರು ಹಳೆಬಂದರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
‘‘ಕೊರೋನದಿಂದಾಗಿ ಮೀನು ಉದ್ಯಮಕ್ಕೆ ನಷ್ಟ. ಆದರೆ ಜನರಿಗೆ ಮೀನು ಲಭಿಸಲಿ ಎಂಬ ದೃಷ್ಟಿಯಿಂದ ಹೊರ ರಾಜ್ಯಗಳಿಂದ ಬರುವ ಮೀನಿನ ಲಾರಿಗಳಿಗೆ ಅನ್‌ಲೋಡ್ ಮಾಡಿ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂಬ ದೃಷ್ಟಿಯಿಂದ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಗೋವಾ, ಮಹಾರಾಷ್ಟ್ರ, ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು ಮೊದಲಾದೆಡೆಗಳಿಂದ ಬರುವ ಸುಮಾರು 25 ಲಾರಿಗಳು ಬರುತ್ತಿವೆ. ಮೀನು ಮಾರಾಟದ ಏಜೆಂಟರ ಜತೆ ಮಾತುಕತೆ ನಡೆಸಿ ಹಳೆ ಬಂದರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕೂಡಾ ಮನಪಾದಿಂದ ಮಾಡಲಾಗುತ್ತಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗಿನ ಜಾವದವರೆಗೆ ಮೀನು ತಂದ ಲಾರಿಗಳು ಅನ್‌ಲೋಡಿಂಗ್ ಮಾಡುವ ಕಾರ್ಯ ಮಾಡಲಿವೆ. ಟೆಂಪೋದಲ್ಲಿ ಬರುವ ಸಣ್ಣ ವ್ಯಾಪಾರಸ್ಥರಿಗೆ ಮಾತ್ರ ಇಲ್ಲಿಗೆ ಪ್ರವೇಶವಿದ್ದು ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಸಾಮಾಜಿಕ ಅಂತರ ಪಾಲಿಸಿಕೊಂಡು ಮಾರಾಟಗಾರರು ಇಲ್ಲಿಂದ ಮೀನು ಖರೀದಿಸಿ ತೆರಳಬೇಕು’’ ಎಂದು ಶಾಸಕ ಕಾಮತ್ ತಿಳಿಸಿದರು.
ಇದೇ ವೇಳೆ ಸೆಂಟ್ರಲ್ ಮಾರುಕಟ್ಟೆ ಪುರಭವನದ ಬದಿ, ಹಳೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರ ತಂಡ ತರಕಾರಿ, ಹಣ್ಣು ಮಾರಾಟ ಮಾಡುವವರಿಗೆ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿತು.







