ಕೊರೋನ ನಿಯಂತ್ರಣದಲ್ಲಿ ಕೇರಳದ ಅತ್ಯುತ್ತಮ ಸಾಧನೆ: ಕೇಂದ್ರ ಸರಕಾರ

ಹೊಸದಿಲ್ಲಿ, ಎ.20: ದೇಶದಲ್ಲಿ ಕೊರೋನ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ ಈಗ ಇಳಿಮುಖವಾಗಿದ್ದು, ಕೊರೋನ ಸೋಂಕು ನಿಯಂತ್ರಣದಲ್ಲಿ ಕೇರಳ ಅತ್ಯುತ್ತಮ ಸಾಧನೆ ದಾಖಲಿಸಿದೆ ಎಂದು ಕೇಂದ್ರ ಸರಕಾರ ಸೋಮವಾರ ಹೇಳಿದೆ.
ಲಾಕ್‌ಡೌನ್ ಜಾರಿಯ ಮುನ್ನ , ಪ್ರತೀ 3.4 ದಿನಕ್ಕೆ ಕೊರೋನ ಸೋಂಕಿನ ಪ್ರಮಾಣ ದ್ವಿಗುಣಗೊಳ್ಳುತ್ತಿದ್ದರೆ ಈಗ ಪ್ರತೀ 7.5 ದಿನಕ್ಕೆ ದ್ವಿಗುಣಗೊಳ್ಳುತ್ತಿದೆ ಎಂದು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇರಳ ಅತ್ಯುತ್ತಮ ಸಾಧನೆ ದಾಖಲಿಸಿದ್ದು ಇಲ್ಲಿ 72.2 ದಿನಕ್ಕೆ ಸೋಂಕು ದ್ವಿಗುಣಗೊಳ್ಳುತ್ತದೆ. ದಿಲ್ಲಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಛತ್ತೀಸ್‌ಗಢ, ತಮಿಳುನಾಡು ಮತ್ತು ಬಿಹಾರದಲ್ಲಿ ಈ ಪ್ರಮಾಣ 20 ದಿನಕ್ಕಿಂತ ಕಡಿಮೆಯಾಗಿದೆ. ಅಂಡಮಾನ್ ಮತ್ತು ನಿಕೋಬಾರ್, ಹರ್ಯಾಣ, ಹಿಮಾಚಲ ಪ್ರದೇಶ, ಚಂಡೀಗಢ, ಅಸ್ಸಾಂ, ಉತ್ತರಾಖಂಡ ಮತ್ತು ಲಡಾಖ್‌ನಲ್ಲಿ 20ರಿಂದ 30 ದಿನವಾಗಿದ್ದರೆ ಒಡಿಶಾದಲ್ಲಿ 39.8 ದಿನಗಳು.
ದೇಶದಲ್ಲಿ 17,265 ಕೊರೋನ ಸೋಂಕಿನ ಪ್ರಕರಣ ದೃಢಪಟ್ಟಿದ್ದು 543 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 2,546 ಜನರು ಗುಣಮುಖರಾಗಿದ್ದು, ಕಳೆದ 14 ದಿನದಲ್ಲಿ 59 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ . ಪುದುಚೇರಿಯ ಮಾಹೆ, ಕರ್ನಾಟಕದ ಕೊಡಗು ಮತ್ತು ಉತ್ತರಾಖಂಡದ ಗಢವಾಲ್‌ನಲ್ಲಿ ಕಳೆದ 28 ದಿನದಿಂದ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ . ಗೋವಾ ಈಗ ಕೊರೋನ ಮುಕ್ತ ರಾಜ್ಯವಾಗಿದೆ ಎಂದವರು ಹೇಳಿದ್ದಾರೆ.
ದೇಶದ 80%ದಷ್ಟು ಕೊರೋನ ವೈರಸ್ ಸೋಂಕಿತರಲ್ಲಿ ರೋಗದ ಲಕ್ಷಣಗಳಿಲ್ಲ ಅಥವಾ ಅಲ್ಪಪ್ರಮಾಣದ ಲಕ್ಷಣ ಕಂಡುಬಂದಿದೆ ಎಂದು ಐಸಿಎಂಆರ್‌ನ ರಮಣ್ ಗಂಗಾಖೇಡ್ಕರ್ ಹೇಳಿದ್ದಾರೆ.







