10 ದೇಶಗಳಿಗಿಂತ ಹೆಚ್ಚು ಕೊರೋನ ಪರೀಕ್ಷೆಯನ್ನು ಅವೆುರಿಕ ನಡೆಸಿದೆ: ಡೊನಾಲ್ಡ್ ಟ್ರಂಪ್

ವಾಶಿಂಗ್ಟನ್, ಎ. 20: ಭಾರತ ಸೇರಿದಂತೆ ಇತರ 10 ದೇಶಗಳನ್ನು ಒಟ್ಟಿಗೆ ಸೇರಿಸಿದರೂ, ನೋವೆಲ್-ಕೊರೋನವೈರಸ್‌ಗೆ ಅವುಗಳಿಗಿಂತ ಹೆಚ್ಚು ಪರೀಕ್ಷೆಗಳನ್ನು ಅಮೆರಿಕ ನಡೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.
ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ನಿರಂತರ ಪ್ರಗತಿಯನ್ನು ಸಾಧಿಸುತ್ತಾ ಬಂದಿದೆ ಹಾಗೂ 41.8 ಲಕ್ಷ ಜನರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದೆ ಎಂದು ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು. ‘‘ಇದು ಜಗತ್ತಿನ ಯಾವುದೇ ಭಾಗಕ್ಕೆ ಹೋಲಿಸಿದರೂ ದಾಖಲೆಯಾಗಿದೆ’’ ಎಂದರು.
ಅಮೆರಿಕದಲ್ಲಿ ಕೊರೋನವೈರಸ್‌ನಿಂದಾಗಿ ಸಂಭವಿಸಿದ ಸಾವುಗಳ ಸಂಖ್ಯೆ 40,000ವನ್ನು ದಾಟಿದೆ ಹಾಗೂ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 7,64,000ವನ್ನು ಮೀರಿದೆ.
ಅಮೆರಿಕದ ಕೊರೋನ ವೈರಸ್ ಕೇಂದ್ರಬಿಂದುವಾಗಿರುವ ನ್ಯೂಯಾರ್ಕ್‌ನಲ್ಲಿ ಈವರೆಗೆ 17,600ಕ್ಕೂ ಮಂದಿ ಅಸುನೀಗಿದ್ದಾರೆ ಹಾಗೂ ಅಲ್ಲಿ 2,42,000ಕ್ಕೂ ಅಧಿಕ ಸೋಂಕು ಪ್ರಕರಣಗಳಿವೆ.
ಅಮೆರಿಕದಲ್ಲಿ ಚಲನ-ವಲನ ನಿರ್ಬಂಧಗಳು ಮತ್ತು ಸುರಕ್ಷಿತ-ಅಂತರ ಕ್ರಮಗಳನ್ನು ಜಾರಿಗೆ ತರದಿದ್ದರೆ, ಈ ವೇಳೆಗೆ ಲಕ್ಷಾಂತರ ಜನರು ಸಾಯುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟರು.







