ಚೀನಾಕ್ಕೆ ಪರಿಣತರ ತಂಡ ಕಳುಹಿಸಲು ಅವೆುರಿಕ ಉತ್ಸುಕ: ಟ್ರಂಪ್

ವಾಶಿಂಗ್ಟನ್, ಎ. 20: ನೋವೆಲ್-ಕೊರೋನ ವೈರಸ್ ಹೇಗೆ ಸ್ಫೋಟಗೊಂಡಿತು ಎಂಬ ಬಗ್ಗೆ ತನಿಖೆ ನಡೆಸಲು ಪರಿಣತರ ತಂಡವೊಂದನ್ನು ಚೀನಾಕ್ಕೆ ಕಳುಹಿಸಲು ಅಮೆರಿಕ ಬಯಸಿದೆ ಎಂದು ದೇಶದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವಿವಾರ ಹೇಳಿದ್ದಾರೆ.
ಚೀನಾಕ್ಕೆ ಗೊತ್ತಿದ್ದೇ ಕೊರೋನ ವೈರಸ್ ಹರಡಿರುವುದಾದರೆ, ಅದರ ಪರಿಣಾಮಗಳನ್ನು ಅದು ಎದುರಿಸಲೇಬೇಕು ಎಂದು ಹೇಳಿದ ಒಂದು ದಿನದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಕೊರೋನವೈರಸನ್ನು ಪ್ಲೇಗ್‌ಗೆ ಹೋಲಿಸಿದರು ಹಾಗೂ ಚೀನಾದ ಬಗ್ಗೆ ನನಗೆ ಸಮಾಧಾನವಿಲ್ಲ ಎಂದರು. ಚೀನಾದ ವುಹಾನ್ ನಗರದಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ನೂತನ-ಕೊರೋನವೈರಸ್ ಸ್ಫೋಟಗೊಂಡಿದೆ.
‘‘ಚೀನಾಕ್ಕೆ ತನಿಖಾ ತಂಡವನ್ನು ಕಳುಹಿಸುವ ಬಗ್ಗೆ ನಾವು ಅವರೊಂದಿಗೆ ತುಂಬಾ ಹಿಂದೆಯೇ ಮಾತನಾಡಿದ್ದೇವೆ. ನಾವು ಅಲ್ಲಿಗೆ ಹೋಗಲು ಬಯಸುತ್ತೇವೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಾವು ತಿಳಿಯಬಯಸುತ್ತೇವೆ. ಆದರೆ, ನಮಗೆ ಆಹ್ವಾನ ಸಿಕ್ಕಿಲ್ಲ ಎಂದು ನಿಮಗೆ ಹೇಳಬಯಸುತ್ತೇನೆ’’ ಎಂದು ಅಮೆರಿಕ ಅಧ್ಯಕ್ಷರು ಹೇಳಿದರು.





