ಬೀಗಮುದ್ರೆ ಮುಂದುವರಿಕೆ ವಿರುದ್ಧ ವಾಶಿಂಗ್ಟನ್‌ನಲ್ಲಿ ಪ್ರತಿಭಟನೆ

ವಾಶಿಂಗ್ಟನ್, ಎ. 20: ಕೊರೋನವೈರಸ್ ಹರಡುವುದನ್ನು ತಡೆಯಲು ಬೀಗಮುದ್ರೆಯನ್ನು ಮುಂದುವರಿಸುವ ವಾಶಿಂಗ್ಟನ್ ರಾಜ್ಯದ ಡೆಮಾಕ್ರಟಿಕ್ ಗವರ್ನರ್ ಜೇ ಇನ್‌ಸ್ಲೀ ಅವರ ನಿರ್ಧಾರದ ವಿರುದ್ಧ ಸುಮಾರು 2,500 ಮಂದಿ ವಾಶಿಂಗ್ಟನ್ ನಗರದಲ್ಲಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ. ಈ ಮೂಲಕ, 50ಕ್ಕಿಂತ ಹೆಚ್ಚು ಜನರು ಒಟ್ಟು ಸೇರಬಾರದು ಎಂಬ ಆದೇಶವನ್ನು ಅವರು ಉಲ್ಲಂಘಿಸಿದ್ದಾರೆ.
ಇದು ಕಳೆದ ವಾರ ಲಾಕ್‌ಡೌನ್ ವಿರುದ್ಧ ಅಮೆರಿಕದ ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳಲ್ಲೇ ಅತಿ ದೊಡ್ಡದಾಗಿದೆ. ಒಲಿಂಪಿಯದಲ್ಲಿರುವ ಸಂಸತ್ತಿನ ಸುತ್ತಮುತ್ತ ನೂರಾರು ಮಂದಿ ಜಮಾಯಿಸಿ ಪ್ರತಿಭಟಿಸಿದರು.
‘‘ಕೆಲವು ಉದ್ಯಮಗಳು ಕಾರ್ಯನಿರ್ವಹಿಸಲು ಅವಕಾಶ ಕೊಡುತ್ತಾ ಇನ್ನುಳಿದ ಉದ್ಯಮಗಳನ್ನು ಮುಚ್ಚುವುದು ರಾಜ್ಯ ಮತ್ತು ಕೇಂದ್ರ ಸಂವಿಧಾನಗಳ ಉಲ್ಲಂಘನೆಯಾಗಿದೆ’’ ಎಂದು ಪ್ರತಿಭಟನೆಯನ್ನು ಸಂಘಟಿಸಿರುವ ವಾಶಿಂಗ್ಟನ್‌ನ ಇಂಜಿನಿಯರ್ ಟೈಲರ್ ಮಿಲ್ಲರ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
Next Story





