ಪಾಲ್‌ಘರ್‌ನಲ್ಲಿ ಮೂವರ ಥಳಿಸಿ ಹತ್ಯೆ ಪ್ರಕರಣ: 101 ಮಂದಿ ಬಂಧನ, ಇಬ್ಬರು ಪೊಲೀಸರ ಅಮಾನತು

ಮುಂಬೈ, ಎ.20: ಮಹಾರಾಷ್ಟ್ರದ ಪಾಲ್‌ಘರ್ ಜಿಲ್ಲೆಯಲ್ಲಿ ಕಳ್ಳರೆಂಬ ಶಂಕೆಯಲ್ಲಿ ಮೂವರನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದ ಘಟನೆಯ ಹಿನ್ನೆಲೆಯಲ್ಲಿ ಕರ್ತವ್ಯಲೋಪದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಮುಂಬೈಯ ಖಾಂಡಿವಿಲಿ ಪ್ರದೇಶದ ಮೂವರು ಅಂತ್ಯಸಂಸ್ಕಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಎಪ್ರಿಲ್ 16ರಂದು ಗುಜರಾತ್‌ನ ಸೂರತ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಾರಾಷ್ಟ್ರದ ಪಾಲ್‌ಘರ್‌ನಲ್ಲಿ ಕೆಲವು ಗ್ರಾಮಸ್ಥರು ಈ ಮೂವರನ್ನು ಕಳ್ಳರೆಂದು ಶಂಕಿಸಿ ಕಾರನ್ನು ತಡೆದು ನಿಲ್ಲಿಸಿದ್ದರು ಮತ್ತು ಅವರನ್ನು ದೊಣ್ಣೆಗಳಿದ ಥಳಿಸಿ ಹತ್ಯೆಗೈದಿದ್ದರು.
ಘಟನೆ ನಡೆದ ದಿನದಂದು ಈ ಪೊಲೀಸರ ಪಾತ್ರದ ಬಗ್ಗೆ ತನಿಖೆ ನಡೆಯುತ್ತಿದೆ ಎಂದ ಪಾಲ್ಘಾರ್ ಜಿಲ್ಲಾಧಿಕಾರಿ ಡಾ. ಕೈಲಾಶ್ ಶಿಂಧೆ ತಿಳಿಸಿದ್ದಾರೆ. ಹತ್ಯೆಯಾದ ಮೂವರು, ಲಾಕ್‌ಡೌನ್ ನಡುವೆಯೂ ಮುಂಬೈನಿಂದ ಗುಜರಾತ್‌ಗೆ ಹೇಗೆ ಪ್ರಯಾಣಿಸಿದ್ದರೆಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಈ ಮಧ್ಯೆ ಈ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದ ಆರೋಪದಲ್ಲಿ ಪಾಲ್ಘಾರನ ಕಾಸಾ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಆನಂದರಾವ್ ಕಾಳೆ ಹಾಗೂ ಸಬ್‌ಇನ್ಸ್‌ಪೆಕ್ಟರ್ ಸುಧೀರ್ ಕತಾರೆ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಲ್‌ಘರ್‌ನಲ್ಲಿ ಮೂವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಿದ್ದು, 101 ಮಂದಿಯನ್ನು ಬಂಧಿಸಿದ್ದಾರೆ ಹಾಗೂ ಅವರನ್ನು ಎಪ್ರಿಲ್ 20ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆಯೆಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.







