ಪೂರ್ವನಿಯೋಜಿತ ಕೃತ್ಯದ ಶಂಕೆ: ಡಿಸಿಎಂ ಡಾ.ಅಶ್ವತ್ಥ ನಾರಾಯಣ
ಪಾದರಾಯನಪುರ ಘಟನೆ

ಬೆಂಗಳೂರು, ಎ. 20: ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಡುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಮೇಲೆ ಪಾದರಾಯನಪುರದಲ್ಲಿ ಹಲ್ಲೆ ನಡೆಸಿರುವುದು ಅತ್ಯಂತ ಹೇಯ. ಪೂರ್ವ ನಿಯೋಜಿತ ಕೃತ್ಯ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಸಂಶಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಲಾಟೆಗೆ ಸಂಬಂಧಿಸಿದಂತೆ 54 ಮಂದಿಯನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಸುಗ್ರಿವಾಜ್ಞೆ ಕರಡು ಸಿದ್ದವಾಗಿದ್ದು, ತಪ್ಪಿತಸ್ಥರಿಗೆ 2 ವರ್ಷ ಶಿಕ್ಷೆ, ದಂಡ ವಿಧಿಸುವ ಸಾಧ್ಯತೆಗಳಿವೆ ಎಂದರು.
ಪಾದರಾಯನಪುರ ಹಾಟ್‍ಸ್ಪಾಟ್‍ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಸಾವು ಸಂಭವಿಸಿದೆ. ಅಲ್ಲಿನ ನಿವಾಸಿಗಳಿಗೆ ಕ್ವಾರಂಟೈನ್ ಮಾಡುವ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಅವರು ಒಪ್ಪಿದ್ದರು. ಆದರೆ, ಸೋಂಕಿತರನ್ನು ಕರೆದುಕೊಂಡು ಹೋಗುವ ವೇಳೆ ಹಲ್ಲೆ ನಡೆಸಿದ್ದು, ಪೂರ್ವ ನಿಯೋಜಿತ ಕೃತ್ಯ ಎಂಬಂತೆ ಕಾಣುತ್ತಿದೆ ಎಂದು ಹೇಳಿದರು.
ಆರೋಗ್ಯ ಸಿಬ್ಬಂದಿ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವವರಿಂದ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಲಭ್ಯವಿರುವ ಎಲ್ಲ ಬಲ ಪ್ರಯೋಗ ಮಾಡಲು ಪೊಲೀಸರಿಗೆ ಮುಕ್ತ ಅವಕಾಶವಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರೇ ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕಠಿಣ ಕ್ರಮವನ್ನು ಪೊಲೀಸರು ಕೈಗೊಳ್ಳಲಿದ್ದಾರೆ ಎಂದರು.
ಶಾಸಕ ಝಮೀರ್ ಅಹ್ಮದ್ ಖಾನ್ ಅವರು ತಿಳುವಳಿಕೆ ಇಲ್ಲದೆ ಹೇಳಿಕೆ ನೀಡುವುದು ತಪ್ಪು. ನನ್ನನ್ನು ಕೇಳದೆ ಪಾದರಾಯನಪುರಕ್ಕೆ ಹೋಗಿದ್ದು ಸರಿಯಲ್ಲ, ಅಲ್ಲಿರುವವರು ಮುಗ್ದರು ಎಂಬ ಹೇಳಿಕೆ ಒಪ್ಪಲಾಗದು. ಸೋಕಿನ ನಿಯಂತ್ರಣಕ್ಕೆ ಸರಕಾರ ಹಗಲು-ರಾತ್ರಿ ಕೆಲಸ ಮಾಡುತ್ತಿದೆ. ಅದಕ್ಕೆ ಜನರ ಸಹಕಾರವೂ ಬೇಕು. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕೊರೋನ ವಿರುದ್ಧದ ಹೋರಾಟ ಯಾವುದೇ ನಿರ್ದಿಷ್ಟ ಜಾತಿ, ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ. ಸೋಂಕಿಗೆ ಇಂತಹ ಯಾವುದೇ ಭೇದಭಾವ ಇರುವುದಿಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಸೋಂಕಿತರು ಸ್ವಇಚ್ಛೆಯಿಂದ ಕ್ವಾರಂಟೈನ್‍ಗೆ ಒಳಗಾಗಬೇಕು ಎಂದು ಅವರು ಸಲಹೆ ಮಾಡಿದರು.







