ಬೆಳಗಾವಿ: ಕ್ವಾರಂಟೈನ್‍ನಲ್ಲಿ ಇರಿಸಲು ವಿರೋಧ ವ್ಯಕ್ತಪಡಿಸುತ್ತಿರುವ ಸ್ಥಳೀಯರು
ಬೆಳಗಾವಿ, ಎ.20: ಕೊರೋನ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಮುಂಜಾಗ್ರತ ಕ್ರಮವಾಗಿ ಲಾಡ್ಜ್, ವಸತಿನಿಲಯ ಹಾಗೂ ಸರಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಆಗಿ ಇರಿಸಲು ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದು ಬೆಳಗಾವಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಿಗೆ ಕಾರಣವಾಗಿದೆ.
ಲಾಡ್ಜ್, ಸರಕಾರಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಿದರೆ ತಮಗೂ ಎಲ್ಲಿ ಕೊರೋನ ವೈರಸ್ ಸೋಂಕು ಹರಡುತ್ತದೆ ಎಂಬ ಆತಂಕದಿಂದಾಗಿ ಜನರು ತಕರಾರು ತೆಗೆಯುತ್ತಿದ್ದಾರೆ. ವೈರಸ್ ಹರಡುವ ಭೀತಿಯ ನಡುವೆಯೂ ಅಂತರವನ್ನು ಮರೆತು ತಮ್ಮ ಪರಿಸರ ಸಂರಕ್ಷಣೆ ಉದ್ದೇಶದಿಂದ ಬೀದಿಗಿಳಿದು ಪ್ರತಿಭಟನೆ ನಡೆಸಿದ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗಗಳು ಜಿಲ್ಲೆಯ ಹಲವು ಕಡೆಗಳಲ್ಲಿ ನಿತ್ಯವೂ ವರದಿಯಾಗುತ್ತಿವೆ. ಅಂತಹವರ ಮನವೊಲಿಸುವುದಕ್ಕೆ ಅಧಿಕಾರಿಗಳು ಸುಸ್ತಾಗುತ್ತಿದ್ದಾರೆ. ಕೆಲವಡೆ, ಪೋಲಿಸ್ ಬಲ ಪ್ರಯೋಗಿಸಿ ಬಳಿಕೆ ಮನವೊಲಿಕೆ ಮಾಡಿದ ಪ್ರಸಂಗಗಳೂ ನಡೆದಿದೆ ಎನ್ನಲಾಗಿದೆ.
ಕೆಲವೆಡೆ ವಿರೋಧನ ನಡುವೆಯೂ ನಗರದ ವಿವಿಧೆಡೆಯ 9 ಹೊಟೇಲ್‍ಗಳನ್ನು ಕ್ವಾರಂಟೈನ್‍ಗೆ ಬಳಸಲಾಗಿದೆ. ಇಲ್ಲಿ, 234 ಮಂದಿಯನ್ನು ಇರಿಸಲಾಗಿದೆ. ಈ ಕೇಂದ್ರಗಳತ್ತ ಆರೋಗ್ಯ ಇಲಾಖೆಯಿಂದ ನಿಗಾ ವಹಿಸಲಾಗಿದೆ.
ಕ್ವಾರಂಟೈನ್ ವಿಷಯದಲ್ಲಿ ಆತಂಕಕ್ಕೆ ಒಳಗಾಗುವ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಸೋಂಕಿತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಅವರ ಸಂಪರ್ಕದಲ್ಲಿದ್ದವರನ್ನು ಮಾತ್ರ ಹಲವು ಕಡೆಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದಕ್ಕಾಗಿ ಹೊಟೇಲ್‍ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕ್ವಾರಂಟೈನ್ ಮಾಡಿದವರಿಗೆ ಸೋಂಕು ಇರುತ್ತದೆ ಎಂದು ಭಾವಿಸಬಾರದು. ಈ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ.







