ಮೆಕ್ಕೆಜೋಳದ ಬೆಲೆ ದಿಢೀರ್ ಕುಸಿತ: ಸಂಕಷ್ಟಕ್ಕೆ ಸಿಲುಕಿದ ರೈತ
ಬಾಗಲಕೋಟೆ, ಎ.20: ಕೇಂದ್ರ ಸರಕಾರ ಲಾಕ್‍ಡೌನ್ ಘೋಷಿಸುತ್ತಿದ್ದಂತೆಯೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರು ಇಲ್ಲದೇ ಮೆಕ್ಕೆಜೋಳದ ಬೆಲೆ ದಿಢೀರನೆ ಪಾತಾಳಕ್ಕೆ ಕುಸಿದಿದ್ದು, ಇದರಿಂದ ರೈತಾಪಿ ವರ್ಗ ದಿಕ್ಕೆಟ್ಟು ಕುಳಿತಿದೆ.
ಫೆಬ್ರವರಿ ಮೊದಲ ವಾರದಲ್ಲಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳದ ಬೆಲೆ ಕ್ವಿಂಟಾಲ್‍ಗೆ 2,070 ಇತ್ತು. ಮಾರ್ಚ್ ಮೊದಲ ವಾರದಲ್ಲಿ 1,870ಕ್ಕೆ ಕುಸಿದಿತ್ತು. ನಂತರ ಘೋಷಣೆಯಾದ ಲಾಕ್‍ಡೌನ್ ಹಾಗೂ ಕೊರೋನ ವೈರಸ್ ಬಾಧೆ ಇಡೀ ಮಾರುಕಟ್ಟೆಯನ್ನು ಬಲಿ ತೆಗೆದುಕೊಂಡಿದೆ.
ಮಾರ್ಚ್ ಕೊನೆಯ ವಾರದಲ್ಲಿ ಮೆಕ್ಕೆಜೋಳ ಕ್ವಿಂಟಲ್‍ಗೆ 1,130ಕ್ಕೆ ಬಂದು ತಲುಪಿದೆ. ಅರ್ಧಕ್ಕರ್ಧ ಬೆಲೆ ಕುಸಿದ ಪರಿಣಾಮ ರೈತಾಪಿ ವರ್ಗ ಸಂಪೂರ್ಣ ಕುಸಿದು ಹೋಗಿದೆ.
ಮೆಕ್ಕೆಜೋಳ ಅಂಗನವಾಡಿ ಆಹಾರ, ಕುಕ್ಕುಟೋದ್ಯಮಕ್ಕೆ ಬಳಕೆಯಾಗುತ್ತದೆ. ಜೊತೆಗೆ ವಿದೇಶಕ್ಕೂ ರಫ್ತು ಆಗುತ್ತದೆ. ಈಗ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. ಲಾಕ್‍ಡೌನ್ ಪರಿಣಾಮ ಮಕ್ಕಳ ಮನೆಗೂ ಆಹಾರ ತಲುಪಿಸಲು ಆಗುತ್ತಿಲ್ಲ. ಹೀಗಾಗಿ, ಅಂಗನವಾಡಿ ಆಹಾರಕ್ಕೆ ಬೇಡಿಕೆಯೂ ಇಲ್ಲ.
ಕೊರೋನ ಹಾಗೂ ಹಕ್ಕಿಜ್ವರದ ನೆಪದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಅಪಪ್ರಚಾರದಿಂದ ಬಹುತೇಕ ಕುಕ್ಕುಟೋದ್ಯಮ ನೆಲಕಚ್ಚಿದೆ. ಮೆಕ್ಕೆಜೋಳ ಕೋಳಿಗೆ ಆಹಾರವಾಗಿ ಬಳಕೆಯಾಗುತ್ತಿತ್ತು. ಈಗ ಫಾರಂಗಳಲ್ಲಿ ಕೋಳಿ ಸಾಕಾಣಿಕೆಯೇ ನಿಂತಿದೆ ಇನ್ನು ಮೆಕ್ಕೆಜೋಳ ಯಾರು ಖರೀದಿಸುತ್ತಾರೆ ಎಂದು ವರ್ತಕರು ಪ್ರಶ್ನಿಸುತ್ತಾರೆ.
ಜಿಲ್ಲೆಯಲ್ಲಿ ಬದಾಮಿ, ಜಮಖಂಡಿ, ಬೀಳಗಿ ಹಾಗೂ ಮುಧೋಲ ತಾಲೂಕುಗಳ ನೀರಾವರಿ ಸೌಕರ್ಯ ಇರುವ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಾರೆ. ಬಾದಾಮಿ ತಾಲೂಕಿನಲ್ಲಿ ಹೆಚ್ಚಿನ ಪಾಲು ಕುಳಗೇರಿ ಹೋಬಳಿಯಲ್ಲಿಯೇ ಬೆಳೆಯಲಾಗುತ್ತಿದೆ.







