ಲಾಕ್ ಡೌನ್ ಸಂದರ್ಭ ಜನರಲ್ಲಿ ತಾಳ್ಮೆ ಅತೀ ಮುಖ್ಯ: ಡಾ.ವಿನಯ್ ಕುಮಾರ್
ಚಿಕ್ಕಮಗಳೂರು, ಎ.20: ದೇಶವೆ ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ಜನರಿಗೆ ತಾಳ್ಮೆ ಅತೀ ಮುಖ್ಯ ಎಂದು ಜಿಲ್ಲಾ ಮನೋರೋಗ ತಜ್ಞ ಡಾ.ವಿನಯ್‍ಕುಮಾರ್ ಹೇಳಿದರು.
ನಗರದ ರಾಮನಹಳ್ಳಿ ಬಿಸಿಎಂ ಹಾಸ್ಟೆಲ್‍ನಲ್ಲಿ ವಲಸಿಗರು ಹಾಗೂ ಕಾರ್ಮಿರಿಗಾಗಿ ತೆರೆದಿರುವ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತಪಾಸಣೆ ನೆಡೆಸಿ ನಂತರ ಮಾತನಾಡಿದ ಅವರು, ಪರಿಹಾರ ಕೇಂದ್ರದಲ್ಲಿರುವ 50 ಜನರಲ್ಲಿ 16 ಜನರಿಗೆ ಮಾನಸಿಕ ಚಿಕಿತ್ಸೆ ನೀಡಲಾಗಿದೆ. ಈ ಕೇಂದ್ರದಲ್ಲಿ ಹೊರಜಿಲ್ಲೆಯಿಂದ ಬಂದಿರುವ ಬಹುತೇಕ ಜನರು ನಮ್ಮನ್ನು ಯಾವಾಗ ಊರಿಗೆ ಕಳುಹಿಸುತ್ತಾರೆ ಎಂಬ ಚಿಂತೆಯಲ್ಲಿದ್ದೀರಿ. ಇಲ್ಲಿ ಸರಿಯಾಗಿ ನಿದ್ರೆ ಬರುತ್ತಿಲ್ಲ,ಊಟ ಸೇರುತ್ತಿಲ್ಲ, ಮನೆಯಲ್ಲಿ ವಯೋ ವೃದ್ದರಿದ್ದಾರೆ ಅವರನ್ನು ನೋಡಿಕೊಳ್ಳಲು ಯಾರು ಇಲ್ಲವಲ್ಲ, ಮುಂಗಾರು ಬಿತ್ತನೆ ಮಾಡಬೇಕಿದೆ ಇಂತಹ ಹಲವು ಸಮಸ್ಯೆಗಳ ಬಗ್ಗೆ ಹೇಳಿ ಕೊಂಡಿದ್ದೀರಿ ಎಂದರು.
ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಮನೆಯಿಂದ ದೂರ ಬಂದು ಹೊಸ ವಾತಾವರ್ಣದಲ್ಲಿರುವ ಯಾವುದೆ ಜನರಿಗೆ ನಿದ್ರೆ ಸಮಸ್ಯೆ, ಗಾಬರಿ,ಭಯ ಆತಂಕ, ಮುಂತಾದ ಮಾನಸೀಕ ತೊಂದರೆಗಳು ಸಾಮಾನ್ಯವಾಗಿ ಕಾಡುತ್ತದೆ.ಮಾದಕ ವ್ಯಸನಕ್ಕೆ ಒಳಗಾದವರು ತಕ್ಷಣಕ್ಕೆ ನಿಲ್ಲಿಸಿದಾಗ ಕೈ ಕಾಲುಗಳು ನಡುಗುವುದು,ಊಟ ಸೇರದಿರುವುದು,ಮೂರ್ಚೆ ಬರುವುದು,ಚಿತ್ತ ವಿಕಲತೆ,ಮುಂತಾದ ಸಮಸ್ಯೆಗೆ ಒಳಗಾಗುತ್ತಾರೆ. ಕೆಲವರು ಖಿನ್ನತೆ ಮತ್ತು ಆತಂಕಕ್ಕೆ ಒಳಗಾಗಿ ಆತ್ಮಹತ್ಯೆ ಪ್ರಯತ್ನವನ್ನು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ವತಿಯಿಂದ ಜಿಲ್ಲೆಯಾಧ್ಯಂತ ತೆರೆದಿರುವ ಪರಿಹಾರ ಕೇಂದ್ರಗಳಿಗೆ ಬೇಟಿ ನೀಡಿ ಮಾನಸಿಕ ಆರೋಗ್ಯ ತಪಾಸಣೆ ನೆಡೆಸಿ ಅವಶ್ಯಕತೆ ಇರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ವೈದ್ಯಾಧಿಕಾರಿ ಡಾ.ಶ್ವೇತಾ, ಡಾ.ವೀಣಾ, ಚಿಕಿತ್ಸಾ ಮನಶಾಸ್ತ್ರಜ್ಞ ನವೀನ್‍ಕುಮಾರ್, ಎಸ್.ಎಚ್.ಜಯ್ಯಣ್ಣ, ಶುಶ್ರೂಷಕಿಯರು, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.







