ಶಿವಮೊಗ್ಗ: ರ್ಯಾಪಿಡ್ ಟೆಸ್ಟ್ ಕಿಟ್ಸ್ ಮೂಲಕ ವೈದ್ಯಕೀಯ ಸಿಬ್ಬಂದಿಗಳ ತಪಾಸಣೆ; ಡಿಸಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ನಡೆಸಲು 2700 ರ್ಯಾಪಿಡ್ ಟೆಸ್ಟ್ ಕಿಟ್ಸ್ ಸ್ವೀಕರಿಸಲಾಗಿದ್ದು, ವೈದ್ಯಕೀಯ ಸಿಬ್ಬಂದಿಗಳು ಸೇರಿದಂತೆ ಕೊರೋನ ವೈರಸ್‍ಗೆ ತುತ್ತಾಗಲು ಸಾಧ್ಯತೆ ಇರುವವರನ್ನು ಈ ಮೂಲಕ ತಪಾಸಣೆ ನಡೆಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯ ಸಮಿತಿಯ ಸಭೆಯಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು.
ವ್ಯಕ್ತಿಯ ರಕ್ತವನ್ನು ಸಂಗ್ರಹಿಸಿ ರ್ಯಾಪಿಡ್ ಟೆಸ್ಟ್ ಕಿಟ್ ಮೂಲಕ ಕೋವಿಡ್ ಪರೀಕ್ಷೆಯನ್ನು ನಡೆಸಲಾಗುವುದು. ಕೊರೋನಕ್ಕೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಸೇರಿದಂತೆ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು ಒಟ್ಟು 670 ಮಂದಿ, ಕ್ವಾರೆಂಟೈನ್‍ನಲ್ಲಿರುವ ಸುಮಾರು 600 ಮಂದಿ, ಇನ್ನಿತರ ಅಗತ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಈ ಮೂಲಕ ತಪಾಸಣೆ ನಡೆಸಲಾಗುವುದು. ತಪಾಸಣೆಗೆ 18ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ 98600 ಕುಟುಂಬಗಳ 4ಲಕ್ಷ ಸದಸ್ಯರ ಆರೋಗ್ಯ ಸರ್ವೇ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ. ಇವರ ಪೈಕಿ 178 ಜನರ ಸ್ವಾಬ್ ಸ್ಯಾಂಪಲ್ ರ್ಯಾಂಡಮ್ ಆಗಿ ಸಂಗ್ರಹಿಸಿ ಪರೀಕ್ಷಿಸಲಾಗಿದ್ದು, ಎಲ್ಲಾ ನೆಗೆಟಿವ್ ವರದಿಯಾಗಿದೆ. ಮುಂದಿನ ಐದು ದಿನಗಳ ಒಳಗಾಗಿ ನಗರ ವ್ಯಾಪ್ತಿ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಇದೇ ರೀತಿ ಈಗಾಗಲೇ ಆಯ್ಕೆ ಮಾಡಲಾಗಿರುವ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ತಕ್ಷಣ ಆರಂಭಿಸುವಂತೆ ಅವರು ಸೂಚನೆ ನೀಡಿದರು.
ಕ್ವಾರೆಂಟೈನ್ ವರದಿ ನೀಡಿ: ಪ್ರಥಮ ಹಂತದಲ್ಲಿ ಹೊರ ಜಿಲ್ಲೆಗಳಿಂದ ಬಂದ ವ್ಯಕ್ತಿಗಳ ಕುರಿತು ಗ್ರಾಮೀಣ ಟಾಸ್ಕ್ ಫೋರ್ಸ್ ಮೂಲಕ ಮಾಹಿತಿ ಪಡೆದು ಉತ್ತಮ ರೀತಿಯಲ್ಲಿ ಕ್ವಾರೆಂಟೈನ್ ಅನುಷ್ಟಾನಗೊಳಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಹೊರ ಜಿಲ್ಲೆಗಳಿಂದ ಬಂದಿರುವ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಸಂಗ್ರಹಿಸಬೇಕು. 28ದಿನಗಳ ಕ್ವಾರೆಂಟೈನ್ ಅವಧಿ ಮುಗಿದಿರುವವರ ಮಾಹಿತಿಯನ್ನು ಒದಗಿಸಲು ಪಿಡಿಒ ಮತ್ತು ತಹಶೀಲ್ದಾರ್ ಗಳಿಗೆ ಸೂಚಿಸುವಂತೆ ಅವರು ಹೇಳಿದರು.
ವಲಸೆ ಕಾರ್ಮಿಕರಿಗೆ ತೆರಳಲು ಅವಕಾಶ: ಹೊರ ಜಿಲ್ಲೆಗಳಿಂದ ಬಂದು ಇಲ್ಲಿ ಸಿಲುಕಿರುವ ವಲಸೆ ಕಾರ್ಮಿಕರಿಗೆ ಅವರ ಜಿಲ್ಲೆಗಳಿಗೆ ತೆರಳಲು ಅವಕಾಶ ನೀಡಲಾಗುವುದು. ಪ್ರಸ್ತುತ ಕ್ವಾರೆಂಟೈನ್‍ನಲ್ಲಿರುವ ಅವರು ತಮ್ಮ ಜಿಲ್ಲೆಗಳಿಗೆ ತೆರಳಲು ಬಯಸಿದರೆ ತೆರಳಬಹುದಾಗಿದೆ ಎಂದು ಅವರು ತಿಳಿಸಿದರು.
ಕೆಎಫ್‍ಡಿ ಲಸಿಕೆ ಕಾರ್ಡ್ ಕಡ್ಡಾಯ: ಕೆಎಫ್‍ಡಿ ಪೀಡಿತ ಪ್ರದೇಶಗಳ ಅರಣ್ಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವವರು ಮೂರು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ಈ ವ್ಯಾಪ್ತಿಯಲ್ಲಿ ವಾಸಿಸುವವರು ಲಸಿಕೆ ಹಾಕಿರುವ ಕಾರ್ಡ್ ತೋರಿಸಿದರೆ ಮಾತ್ರ ಅವರ ಮನೆಯಿಂದ ಹೊರ ಬರಲು, ಕೃಷಿ ಚಟುವಟಿಕೆಗಳಿಗೆ ತೆರಳಲು ಅವಕಾಶ ನೀಡಲಾಗುವುದು. ಕಾರ್ಡ್ ಇಲ್ಲದವರು ಹೊರಬಂದರೆ ಪ್ರಕರಣ ದಾಲಿಸಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೆಎಫ್‍ಡಿ ಹರಡಿರುವ 33 ಅರಣ್ಯ ಹಾಟ್‍ಸ್ಪಾಟ್‍ಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಈ ವ್ಯಾಪ್ತಿಯಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಒಣ ಎಲೆ ಸಂಗ್ರಹಿಸಲು ಕಾಡಿಗೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ವ್ಯಾಪ್ತಿಯಲ್ಲಿರುವ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಈ ವ್ಯಾಪ್ತಿಯಲ್ಲಿ ವಾಸವಾಗಿರುವವರು ತಮ್ಮ ಮನೆ ಸುತ್ತ ಬೆಳೆದಿರುವ ಲಂಟಾನಾ ಇತ್ಯಾದಿ ಕಳೆ ಗಿಡಗಳನ್ನು ತೆಗೆದು ಪರಿಸರವನ್ನು ಸ್ವಚ್ಛವಾಗಿಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.







