ಅಮೆರಿಕಕ್ಕೆ ವಲಸಿಗರಿಗೆ ತಾತ್ಕಾಲಿಕ ಪ್ರವೇಶ ನಿಷೇಧ : ಟ್ರಂಪ್
ವಾಷಿಂಗ್ಟನ್ , ಎ.21: ಕೋವಿಡ್ -19 ಕಾರಣದಿಂದಾಗಿ ಅಮೆರಿಕಕ್ಕೆ ಬರುವ ಎಲ್ಲಾ ವಲಸಿಗರಿಗೂ ಪ್ರವೇಶಕ್ಕೆ ನಿರ್ಬಂಧ ಹೇರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ಮಹಾಮಾರಿ ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಮತ್ತು ಅದರಂತೆ ಅಮೆರಿಕದ ನಿವಾಸಿಗಳಿಗೆ ಉದ್ಯೋಗದಲ್ಲಿ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ವಲಸಿಗರ ಪ್ರವೇಶಕ್ಕೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ನಿರ್ಣಯ ಪತ್ರಕ್ಕೆ ಶೀಘ್ರದಲ್ಲೇ ಸಹಿ ಹಾಕಲಿರುವುದಾಗಿ ಹೇಳಿರುವ ಟ್ರಂಪ್ ದೇಶದ ಅರ್ಥ ವ್ಯವಸ್ಥೆ ಹಾಗೂ ಅಮೆರಿಕನ್ನರ ಉದ್ಯೋಗ ಎರಡನ್ನೂ ಕಾಪಾಡಲು ಈ ಕ್ರಮ ಅನಿವಾರ್ಯ ಎಂದು ಹೇಳಿದ್ದಾರೆ.
ಟ್ರಂಪ್ ಅವರ ನಿರ್ಧಾರದಿಂದ ಪರಿಣಾಮ ಏನಾಗಬಹುದು ಎಂಬುದು ತಕ್ಷಣ ಸ್ಪಷ್ಟವಾಗಿಲ್ಲ, ಮತ್ತು ಶ್ವೇತಭವನವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಳೆದ ತಿಂಗಳು ಸಾಂಕ್ರಾಮಿಕ ರೋಗದಿಂದಾಗಿ ವಲಸಿಗರು ಸೇರಿದಂತೆ ಎಲ್ಲಾ ವೀಸಾ ಪ್ರಕ್ರಿಯೆಯನ್ನು ಯುಎಸ್ ಸ್ಥಗಿತಗೊಳಿಸಿತು.
ಅನಿವಾರ್ಯವಲ್ಲದ ಪ್ರಯಾಣದ ಗಡಿ ನಿರ್ಬಂಧಗಳನ್ನು ಕನಿಷ್ಠ ಮೇ ಮಧ್ಯದವರೆಗೆ ವಿಸ್ತರಿಸಲು ಯುಎಸ್ ಈಗಾಗಲೇ ಕ್ರಮ ಕೈಗೊಂಡಿದೆ .
ತಾತ್ಕಾಲಿಕ ಕೆಲಸದ ವೀಸಾ ಹೊಂದಿರುವ ಜನರು, ವಿದ್ಯಾರ್ಥಿಗಳು ಮತ್ತು ವ್ಯಾಪಾರ ಪ್ರಯಾಣಿಕರಿಗೆ ವಿನಾಯಿತಿ ನೀಡಲಾಗಿದ್ದರೂ, ಯುರೋಪಿಯನ್ ದೇಶಗಳು ಮತ್ತು ಚೀನಾದಿಂದ ಪ್ರಯಾಣವನ್ನು ತೀವ್ರವಾಗಿ ನಿರ್ಬಂಧಿಸಲಾಗಿದೆ.