ಭಾರತ ಮುಸ್ಲಿಮರ ಪಾಲಿಗೆ ಸ್ವರ್ಗ: ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ

ಹೊಸದಿಲ್ಲಿ: “ಭಾರತ ಮುಸ್ಲಿಮರ ಪಾಲಿಗೆ ಸ್ವರ್ಗವಾಗಿದೆ ಹಾಗೂ ಅವರ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳು ಇಲ್ಲಿ ಸುರಕ್ಷಿತವಾಗಿವೆ'' ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಭಾರತದಲ್ಲಿ ಇಸ್ಲಾಮೊಫೋಬಿಯಾ ಅಥವಾ ಇಸ್ಲಾಂ ವಿರುದ್ಧದ ದ್ವೇಷದ ಕುರಿತಂತೆ ಇಸ್ಲಾಮಿಕ್ ಸಹಕಾರ ಸಂಘಟನೆ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಸಚಿವರ ಮೇಲಿನ ಮಾತುಗಳು ಬಂದಿವೆ.
“ಭಾರತದ ಮುಸ್ಲಿಮರು ಸ್ಥಿತಿವಂತರಾಗಿದ್ದಾರೆ. ಇಲ್ಲಿನ ವಾತಾವರಣವನ್ನು ಹಾಳುಗೆಡವಲು ಯತ್ನಿಸುತ್ತಿರುವವರು ಅವರ ಸ್ನೇಹಿತರಾಗಲು ಸಾಧ್ಯವಿಲ್ಲ, ಇಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ನಾಗರಿಕರ ಹಕ್ಕುಗಳು ಖಾತರಿಯಾಗಿವೆ'' ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಲು ಹಾಗೂ ದೇಶದಲ್ಲಿ ಇಸ್ಲಾಂ ವಿರೋಧಿ ಘಟನೆಗಳನ್ನು ನಿಲ್ಲಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಇಸ್ಲಾಮಿಕ್ ಸಹಕಾರ ಸಂಘಟನೆ ರವಿವಾರ ಹೇಳಿಕೆಯೊಂದರ ಮೂಲಕ ಆಗ್ರಹಿಸಿತ್ತು. ಭಾರತದ ಮಾಧ್ಯಮ ಕೂಡ ಮುಸ್ಲಿಮರನ್ನು ಕೆಟ್ಟ ದೃಷ್ಟಿಯಲ್ಲಿ ಬಿಂಬಿಸುತ್ತಿದೆ ಎಂದು ಸಂಘಟನೆಯ ಖಾಯಂ ಮಾನವ ಹಕ್ಕುಗಳ ಆಯೋಗ ಹೇಳಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಸಚಿವ ನಖ್ವಿ “ನಾವು ದೃಢತೆಯಿಂದ ನಮ್ಮ ಕಾರ್ಯ ನಿರ್ವಹಿಸುತ್ತಿದ್ದೇವೆ. ಪ್ರಧಾನಿ ಯಾವತ್ತೂ ಮಾತನಾಡಿದಾಗ ದೇಶದ 130 ಕೋಟಿ ಭಾರತೀಯರ ಹಕ್ಕುಗಳು ಹಾಗೂ ಕಲ್ಯಾಣದ ಬಗ್ಗೆ ಮಾತನಾಡುತ್ತಾರೆ. ಇದು ಕೆಲವರ ಕಣ್ಣಿಗೆ ಕಾಣಿಸದೇ ಇದ್ದರೆ ಅದು ಅವರ ಸಮಸ್ಯೆ” ಎಂದು ಹೇಳಿದರು.







