ಲೋಕಸಭೆಯ ಸಿಬ್ಬಂದಿಗೆ ಕೊರೋನ ವೈರಸ್ ದೃಢ
ಹೊಸದಿಲ್ಲಿ: ಲೋಕಸಭೆಯ ಸಿಬ್ಬಂದಿಯೊಬ್ಬರಲ್ಲಿ ಕೊರೋನ ವೈರಸ್ ದೃಢಪಟ್ಟಿದೆ ಎಂದು ವರದಿಯಾಗಿದೆ. ಸೋಂಕಿಗೊಳಗಾದ ವ್ಯಕ್ತಿ ಸಂಸತ್ತಿನಲ್ಲಿ ಕೆಲಸ ಮಾಡುತ್ತಿರಲಿಲ್ಲ, ಬದಲಾಗಿ ಲೋಕಸಭಾ ಸೆಕ್ರೆಟಿರಿಯೇಟ್ ನ ಮತ್ತೊಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಮಾರ್ಚ್ 23ರಂದು ಬಜೆಟ್ ಅಧಿವೇಶನ ಮುಂದೂಡಿದ ನಂತರ ಈ ಸಿಬ್ಬಂದಿ ಮನೆಯಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಿಬ್ಬಂದಿ ಕಳೆದ ಕೆಲ ದಿನಗಳಿಂದ ಕಚೇರಿಗೆ ಬರುತ್ತಿರಲಿಲ್ಲ. ಈತನಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಪರೀಕ್ಷಿಸಿದಾಗ ಕೊರೋನ ಸೋಂಕು ದೃಢಪಟ್ಟಿದೆ. ಬಳಿಕ ಆತನನ್ನು ದಿಲ್ಲಿಯ ಆರ್ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಕುಟುಂಬದವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು 11 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ. ಸಿಬ್ಬಂದಿಯೊಂದಿಗೆ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಪತ್ತೆಹಚ್ಚಲಾಗುತ್ತಿದೆ. ಕೇಂದ್ರ ದಿಲ್ಲಿಯಲ್ಲಿರುವ ಈತನ ಮನೆಯನ್ನು ಸೀಲ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.