ತಮಿಳು ಸುದ್ದಿ ವಾಹಿನಿಯ 27 ಸಿಬ್ಬಂದಿಗೆ ಕೊರೋನ ಸೋಂಕು ದೃಢ

ಚೆನ್ನೈ: ನಗರದಲ್ಲಿ ಕಚೇರಿ ಹೊಂದಿರುವ ತಮಿಳು ಸುದ್ದಿ ವಾಹಿನಿಯೊಂದರ 26 ಉದ್ಯೋಗಿಗಳಿಗೆ ಕೋವಿಡ್-19 ಸೋಂಕು ತಗಲಿರುವುದು ಮಂಗಳವಾರ ದೃಢ ಪಟ್ಟಿದೆ.
ಸೋಂಕು ತಗಲಿರುವವರಲ್ಲಿ ಈ ಸುದ್ದಿ ವಾಹಿನಿಯ ಕಚೇರಿಯಲ್ಲಿ ಕೆಲಸ ಮಾಡುವವರು ಹಾಗೂ ವರದಿಗಾರಿಕೆ ತಂಡಗಳಲ್ಲಿರುವವರು ಸೇರಿದ್ದಾರೆ. ಎರಡು ದಿನಗಳ ಹಿಂದೆ ವಾಹಿನಿಯ 24 ವರ್ಷದ ಪತ್ರಕರ್ತರೊಬ್ಬರು ಕೊರೋನ ಪಾಸಿಟಿವ್ ಆದ ನಂತರ ಉಳಿದ 94 ಉದ್ಯೋಗಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು.
ಮೊದಲು ಕೊರೋನ ಸೋಂಕು ತಗಲಿದ ಪತ್ರಕರ್ತನಿಗೆ ಸಬ್-ಇನ್‍ಸ್ಪೆಕ್ಟರ್ ಆಗಿರುವ ಆತನ ತಂದೆಯಿಂದ ಸೋಂಕು ತಗಲಿರಬಹುದೇ ಎಂಬ ಶಂಕೆಯಿದೆ. ಕಚೇರಿಯ ಒಳಗೆ ಹಾಗೂ ಹೊರಗೆ ಹೋಗಲು ಯಾರಿಗೂ ಅನುಮತಿಯಿಲ್ಲ. ವಾಹಿನಿ ಕಾರ್ಯಾಚರಿಸುವಂತಾಗಲು ಸದ್ಯ ಪ್ರೊಡಕ್ಷನ್ ಕಂಟ್ರೋಲ್ ರೂಂನ ಕೇವಲ ಮೂವರು ಉದ್ಯೋಗಿಗಳಿಗೆ ಅನುಮತಿಸಲಾಗಿದೆ. ಉಳಿದವರಿಗೆ ಗೃಹ ಕ್ವಾರಂಟೈನಿನಲ್ಲಿರಲು ತಿಳಿಸಲಾಗಿದೆ
ಮೊದಲು ಸೋಂಕು ತಗಲಿದ ಪತ್ರಕರ್ತನ ಕುಟುಂಬ ಸದಸ್ಯರು ಅದಾಗಲೇ ಕೊರೋನ ಪರೀಕ್ಷೆಗೊಳಗಾಗಿದ್ದು ಅವರೆಲ್ಲರ ವರದಿ ನೆಗೆಟಿವ್ ಎಂದು ತಿಳಿದು ಬಂದಿದೆ.
ರವಿವಾರ ತಮಿಳು ಸುದ್ದಿ ವಾಹಿನಿಯ ಪತ್ರಕರ್ತ ಹಾಗೂ ತಮಿಳು ದೈನಿಕವೊಂದರ ಪತ್ರಕರ್ತನಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ತಮಿಳುನಾಡಿನಲ್ಲಿ ಇಲ್ಲಿಯ ತನಕ 28 ಪತ್ರಕರ್ತರಿಗೆ ಕೊರೋನ ಸೋಂಕು ತಗಲಿದೆ.





