ರಸ್ತೆ ಅಪಘಾತ : ಖಾಸಗಿ ಚಾನೆಲ್ ವರದಿಗಾರ ಮೃತ್ಯು

ಬೆಂಗಳೂರು, ಎ. 21: ಖಾಸಗಿ ಸುದ್ದಿವಾಹಿನಿಯ ಪತ್ರಕರ್ತನೋರ್ವ ವರದಿಗಾರಿಕೆಗೆ ತೆರಳಿ ತನ್ನ ದ್ವಿಚಕ್ರ ವಾಹನದಲ್ಲಿ ಹಿಂದಿರುಗುವ ವೇಳೆ ಎಟಿಎಂಗೆ ಹಣ ತುಂಬಿಸುತ್ತಿದ್ದ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ರಸ್ತೆ ಅಪಘಾತದಲ್ಲಿ ಪತ್ರಕರ್ತ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ ನಡೆದಿದೆ.
ಮೃತಪಟ್ಟ ಪತ್ರಕರ್ತನನ್ನು ಕನಕಪುರ ಮೂಲದ ಹಾರೋಹಳ್ಳಿ ಸಮೀಪದ ಪಡುವಣಗೆರೆ ನಿವಾಸಿ ಹನುಮಂತು ಎಂದು ಗುರುತಿಸಲಾಗಿದೆ.
ನಗರದ ಮೈಸೂರು ರಸ್ತೆ ಪಾದರಾಯನಪುರ ಗಲಾಟೆಗೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರ ಕಾರಾಗೃಹಕ್ಕೆ ವರ್ಗಾವಣೆ ಸಂಬಂಧದ ವರದಿಗಾರಿಕೆಗೆ ತೆರಳಿ ಹಿಂದಿರುಗುವ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ ಪತ್ರಕರ್ತ ಹನುಮಂತು ಅವರಿಗೆ ಒಂದು ವರ್ಷದ ಗಂಡು ಮಗುವಿದೆ. ಐದಾರು ವರ್ಷಗಳಿಂದ ಖಾಸಗಿ ಸುದ್ದಿ ವಾಹಿನಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ಯುವ ಪತ್ರಕರ್ತನ ನಿಧನಕ್ಕೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ನೆರವು: ಕ್ರಿಯಾಶೀಲ, ಉತ್ಸಾಹಿ, ದಿಟ್ಟ ಪತ್ರಕರ್ತರಾಗಿದ್ದ ಹನುಮಂತು ಅವರು ಪ್ರಾಮಾಣಿಕತೆಯನ್ನು ನಂಬಿದ್ದರು. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿರುವ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಾ.ಅಶ್ವತ್ಥ ನಾರಾಯಣ, ಹನುಮಂತು ಕುಟುಂಬಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ.ನೆರವು ಪ್ರಕಟಿಸಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಲಾ 5 ಲಕ್ಷ ರೂ.ನೆರವು ನೀಡಲಾಗುವುದು ಎಂದು ಘೋಷಿಸಿದ್ದಾರೆ.
"ನನಗೆ ಆತ್ಮೀಯರಾಗಿದ್ದ ಹನುಮಂತು ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದ ದಿಟ್ಟ ಪತ್ರಕರ್ತರಾಗಿದ್ದರು. ಸಮಸ್ಯೆಗಳನ್ನು ನನ್ನ ಗಮನಕ್ಕೆ ತಂದು ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದರು. ಅವರ ಕುಟುಂಬದ ನೋವಿನಲ್ಲಿ ನಾನು ಭಾಗಿಯಾಗುತ್ತೇನೆ. ಕರ್ತವ್ಯ ನಿರ್ವಹಣೆ ವೇಳೆ ಪ್ರಾಣತೆತ್ತ ಹನುಮಂತು ಆತ್ಮಕ್ಕೆ ಶಾಂತಿ ದಕ್ಕಲಿ"
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ವರದಿಗಾರ ಹನುಮಂತು ಕುಟುಂಬಕ್ಕೆ 5 ಲಕ್ಷ ಪರಿಹಾರ: ಸಿಎಂ
ಖಾಸಗಿ ಸುದ್ದಿವಾಹಿನಿಯ ರಾಮನಗರ ವರದಿಗಾರ ಹನುಮಂತು ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಅಕಾಲಿಕ ನಿಧನದ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಅವರು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಾಮನಗರದಲ್ಲಿ ಇಂದು ಅಪಘಾತದಲ್ಲಿ ಮೃತಪಟ್ಟ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಕುಟುಂಬದವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.
ರಾಮನಗರದಲ್ಲಿ ಇಂದು ಬೆಳಗ್ಗೆ ಹನುಮಂತು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಡಿಕೆಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹನುಮಂತು ಕುಟುಂಬಕ್ಕೆ 5 ಲಕ್ಷ ರುಪಾಯಿ ನೆರವು ನೀಡುವುದಾಗಿ ಹೇಳಿದ್ದರು. ಡಿ.ಕೆ. ಶಿವಕುಮಾರ್ ಅವರು ಈ ಟ್ರಸ್ಟ್ ನ ಅಧ್ಯಕ್ಷರು. ಅದರಂತೆ ಇದೀಗ ಶಿವಕುಮಾರ್ ಅವರು ಟ್ರಸ್ಟ್ ನಿಂದ 5 ಲಕ್ಷ ರೂ. ನೆರವು ಘೋಷಿಸಿದ್ದಾರೆ.
ಅಪಘಾತದಿಂದ ದುರ್ಮರಣಕ್ಕೀಡಾದ ರಾಮನಗರ ಜಿಲ್ಲೆಯ ಪಬ್ಲಿಕ್ ಟಿವಿ ವರದಿಗಾರ ಹನುಮಂತು ಅವರ ಅಕಾಲ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.
— H D Kumaraswamy (@hd_kumaraswamy) April 21, 2020
ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹನುಮಂತು ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿಗಳ ವೈಯಕ್ತಿಕ ನೆರವು ನೀಡುತ್ತೇನೆ.
1/2 pic.twitter.com/UnU0wvdEke







