ಪಶ್ಚಿಮ ಬಂಗಾಳಕ್ಕೆ ಕೇಂದ್ರದ ತಂಡ: ಮಮತಾ ಸರಕಾರದಿಂದ ತೀವ್ರ ವಿರೋಧ
ಹೊಸದಿಲ್ಲಿ: ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಲಾಗಿದೆ ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕೇಂದ್ರ ಸರಕಾರ ಪಶ್ಚಿಮ ಬಂಗಾಳಕ್ಕೆ ಕಳುಹಿಸಿರುವ ಅಂತರ-ಸಚಿವಾಲಯದ ತಂಡ ಅಲ್ಲಿನ ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದಿಂದ ತೀವ್ರ ಪ್ರತಿರೋಧ ಎದುರಿಸುತ್ತಿದೆ.
“ನಾವು ಇಂದು ಕೆಲ ಸ್ಥಳಗಳಿಗೆ ಭೇಟಿ ನೀಡಬಹುದೆಂಬ ಭರವಸೆ ನೀಡಲಾಗಿತ್ತು. ಆದರೆ ಕೆಲ ಸಮಸ್ಯೆಗಳಿವೆ, ನಾವು ಹೊರಗೆ ಹೋಗುವ ಹಾಗಿಲ್ಲ'' ಎಂದು ಕೊಲ್ಕತ್ತಾಗೆ ಆಗಮಿಸಿರುವ ಕೇಂದ್ರ ತಂಡದ ನೇತೃತ್ವ ವಹಿಸಿರುವ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ಅಪೂರ್ವ ಚಂದ್ರ ಹೇಳಿದ್ದಾರೆ. “ಇತರ ರಾಜ್ಯಗಳಿಗೆ ತೆರಳಿರುವ ಕೇಂದ್ರ ತಂಡಗಳಿಗೆ ಸಮಸ್ಯೆಯಾಗಿಲ್ಲ, ಅಲ್ಲಿ ಬೆಂಬಲ ದೊರಕಿವೆ'' ಎಂದೂ ಅವರು ಹೇಳಿದ್ದಾರೆ.
ಕೇಂದ್ರ ತಂಡ ಪಶ್ಚಿಮ ಬಂಗಾಳಕ್ಕೆ ಆಗಮಿಸುವ ಕುರಿತಂತೆ ಗೃಹ ಸಚಿವ ಅಮಿತ್ ಶಾ ಖುದ್ದಾಗಿ ದೂರವಾಣಿ ಮೂಲಕ ಮಮತಾ ಬ್ಯಾನರ್ಜಿಗೆ ತಿಳಿಸುವ ಮುನ್ನವೇ ಇಂತಹ ತಂಡ ಕಳುಹಿಸುವುದಕ್ಕೆ ವಿರೋಧ ಸೂಚಿಸಿ ಮಮತಾ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರಲ್ಲದೆ, ತಂಡದ ಆಗಮನ ಶಿಷ್ಟಾಚಾರದ ಉಲ್ಲಂಘನೆ ಎಂದೂ ಹೇಳಿಕೊಂಡಿದ್ದರು.
ಕೇಂದ್ರದ ತಂಡ ಬಂಗಾಳದ ಏಳು ಜಿಲ್ಲೆಗಳಿಗೆ ಭೇಟಿ ನೀಡುವ ಉದ್ದೇಶ ಇಟ್ಟುಕೊಂಡಿದೆ. ಮೂರು ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಒಂದೇ ಒಂದು ಕೊರೋನ ಪ್ರಕರಣ ವರದಿಯಾಗಿಲ್ಲ ಎಂದು ಅಲ್ಲಿನ ಸರಕಾರ ಹೇಳಿದೆ.
ಕೇಂದ್ರದ ತಂಡಗಳು ಮಹಾರಾಷ್ಟ್ರದ ಪುಣೆ, ರಾಜಸ್ಥಾನದ ಜೈಪುರ್, ಪಶ್ಚಿಮ ಬಂಗಾಳದ ಕೊಲ್ಕತ್ತಾ, ಹೌರಾ, ಪೂರ್ವ ಮಿಡ್ನಾಪುರ, 24 ಪರಗಣ ನಾರ್ತ್, ಡಾರ್ಜೆಲಿಂಗ್, ಕಲೀಂಪೊಂಗ್ ಹಾಗೂ ಜಬಲ್ಪುರಿ ಮತ್ತು ಮಧ್ಯ ಪ್ರದೇಶದ ಇಂದೋರ್ ನಗರಗಳಿಗೆ ತೆರಳಿವೆ.
ಕೇಂದ್ರ ತಂಡಗಳು ತೆರಳಿರುವ ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯಗಳು ವಿಪಕ್ಷಗಳ ಆಡಳಿತದಲ್ಲಿವೆ.