ನ್ಯೂಯಾರ್ಕ್‌ನಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಮಿಲ್ಕಾ ಸಿಂಗ್ ಪುತ್ರಿ

ಹೊಸದಿಲ್ಲಿ, ಎ.21: ಓಟದ ದಂತಕತೆ ಮಿಲ್ಕಾ ಸಿಂಗ್ ಪುತ್ರಿ ಹಾಗೂ ಖ್ಯಾತ ಗಾಲ್ಫರ್ ಜೀವ್ ಮಿಲ್ಕಾ ಸಿಂಗ್ ಅವರ ಹಿರಿಯ ಸಹೋದರಿ ನ್ಯೂಯಾರ್ಕ್‌ನಲ್ಲಿ ಕೋವಿಡ್-19 ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ.
ಮೋನಾ ಮಿಲ್ಕಾ ಸಿಂಗ್ ನ್ಯೂಯಾರ್ಕ್‌ನಮೆಟ್ರೊಪಾಲಿಟನ್ ಹಾಸ್ಪಿಟಲ್ ಸೆಂಟರ್‌ನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕೊರೋನ ವೈರಸ್‌ನ ತುರ್ತು ರೋಗಿಗಳ ಆರೈಕೆ ಮಾಡುತ್ತಿದ್ದಾರೆ.
ಮೋನಾ ನ್ಯೂಯಾರ್ಕ್ ನಗರದ ಮೆಟ್ರೊಪಾಲಿಟನ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ರೂಮ್‌ನ ವೈದ್ಯರಾಗಿದ್ದು, ಕೊರೋನ ಲಕ್ಷಣವಿರುವ ರೋಗಿಗೂ ಚಿಕಿತ್ಸೆ ನೀಡುತ್ತಾರೆ. ರೋಗಿಯನ್ನು ಕ್ವಾರಂಟೈನ್‌ಗೆ ಕಳುಹಿಸುವ ಮೊದಲು ಅವರನ್ನು ಸರಿಯಾಗಿ ತಪಾಸಣೆ ನಡೆಸುತ್ತಾರೆ’’ಎಂದು 4 ಬಾರಿಯ ಯುರೋ ಟೂರ್ ಚಾಂಪಿಯನ್ ಜೀವ್ ಹೇಳಿದ್ದಾರೆ.
54ರ ಹರೆಯದ ಮೋನಾ 90ರ ದಶಕದಲ್ಲಿ ಅಮೆರಿಕಕ್ಕೆ ತೆರಳುವ ಮೊದಲು ಪಾಟಿಯಾಲ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಮುಗಿಸಿದ್ದರು. ಇದೀಗ ಅವರು 20 ವರ್ಷಗಳಿಂದ ಅಮೆರಿಕದಲ್ಲಿದ್ದಾರೆ.
‘‘ನನ್ನ ಸಹೋದರಿಯ ಬಗ್ಗೆ ಹೆಮ್ಮೆಯಾಗುತ್ತಿದೆ. ಅಕೆ ಪ್ರತಿದಿನ ಮ್ಯಾರಥಾನ್‌ನಲ್ಲಿ ಓಡಿದಂತೆ ಓಡುತ್ತಿದ್ದಾರೆ. ಆಕೆ ವಾರಕ್ಕೆ 5 ದಿನ ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಹಗಲು, ಇನ್ನೊಮ್ಮೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಾರೆ. 12 ಗಂಟೆಗಳ ಪಾಳಿ ಅತ್ಯಂತ ಕಷ್ಟಕರ. ಆದಾಗ್ಯೂ ಆಕೆ ಉತ್ತಮವಾಗಿ ಇದನ್ನು ನಿಭಾಯಿಸುತ್ತಿದ್ದಾರೆ’’ಎಂದು ಜೀವ್ ಹೇಳಿದ್ದಾರೆ.







