ಕೊರೋನ ವೈರಸ್ : ಕೇರಳದಲ್ಲಿ 19 ಹೊಸ ಸೋಂಕು ದೃಢ

ಕಾಸರಗೋಡು : ಕೇರಳದಲ್ಲಿ ಮಂಗಳವಾರ 19 ಹೊಸ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು , ಈ ಪೈಕಿ ಮೂರು ಕಾಸರಗೋಡು ಜಿಲ್ಲೆಗೆ ಸೇರಿದೆ. ಕಣ್ಣೂರು 10 , ಪಾಲಕ್ಕಾಡ್ 4, ಮಲಪ್ಪುರಂ, ಕೊಲ್ಲಂ ನಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಕೆಲ ದಿನಗಳ ಬಳಿಕ ಒಂದೇ ದಿನ ಅತೀ ಹೆಚ್ಚು ಪ್ರಕರಣ ದಾಖಲಾಗಿದೆ. ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ 171ಕ್ಕೆ ತಲುಪಿದೆ. ಈ ಪೈಕಿ 27 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಮಂಗಳವಾರ ಮೂರು ಮಂದಿ ಬಿಡುಗಡೆ ಗೊಂಡಿದ್ದಾರೆ.
ಮಂಗಳವಾರ ಸೋಂಕು ಪತ್ತೆಯಾದವರಲ್ಲಿ ಚೆಂಗಳದ 48 ವರ್ಷದ ನಿವಾಸಿ, 20 ವರ್ಷದ ಯುವಕ, ಮೊಗ್ರಾಲ್ ಪುತ್ತೂರಿನ 43 ವರ್ಷದ ವ್ಯಕ್ತಿ ಒಳಗೊಂಡಿದ್ದಾರೆ. ಮೂವರೂ ದುಬೈಯಿಂದ ಬಂದವರಾಗಿದ್ದಾರೆ.
ಮೇ 3 ವರೆಗೆ ಕಡ್ಡಾಯ ನಿಯಂತ್ರಣ
ಕಾಸರಗೋಡು ಜಿಲ್ಲೆಯಲ್ಲಿ ಮೇ 3 ವರೆಗೆ ಲಾಕ್ ಡೌನ್ ಅಂಗವಾಗಿ ಕಡ್ಡಾಯ ನಿಯಂತ್ರಣಗಳು ಮುಂದುವರಿಯಲಿವೆ ಎಂದು ಜಿಲ್ಲಾಧಿಕಾರಿ ಡಾ. ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಮಂಜೇಶ್ವರ, ಕೋಡೋಂ, ಬೇಳೂರು ಗ್ರಾಮ ಪಂಚಾಯತ್ ಗಳು ಹಾಟ್ ಸ್ಪಾಟ್ ಪಟ್ಟಿಯಲ್ಲಿ ಒಳಗೊಂಡಿರುವುದು. ಈ ಪಂಚಾಯತ್ ನಿವಾಸಿಗಳಾದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದವರು ತಿಳಿಸಿದ್ದಾರೆ .







