ಉಡುಪಿ: ಎ.22ರಂದು ರೆಡ್‌ಕ್ರಾಸ್ ವತಿಯಿಂದ ರಕ್ತದಾನ ಶಿಬಿರ
ಉಡುಪಿ, ಎ.21: ಕೊರೋನಾ ವೈರಸ್ (ಕೋವಿಡ್-19) ಕಾರಣ ಇಂದು ಇಡೀ ದೇಶವೇ ಲಾಕ್‌ಡೌನ್‌ನಲ್ಲಿದ್ದು, ಇದರಿಂದ ನಮ್ಮ ಹೆಚ್ಚಿನ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ಬಹಳಷ್ಟು ಇರುವುದರಿಂದ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕವು ಅತೀ ಹೆಚ್ಚು ರಕ್ತದಾನ ಶಿಬಿರವನ್ನು ಸಂಘಟಿಸುವ ಮೂಲಕ ರಕ್ತ ಶೇಖರಣೆ ನಡೆಸಲು ಮುಂದಾಗಿದೆ.
ರಕ್ತದಾನ ಶಿಬಿರವನ್ನು ಎ.22ರ ಬೆಳಗ್ಗೆ 9:30ರಿಂದ ಅಪರಾಹ್ನ 2 ಗಂಟೆಯವರೆಗೆ ಅಜ್ಜರಕಾಡಿನಲ್ಲಿರುವ ರೆಡ್‌ಕ್ರಾಸ್ ಭವನದಲ್ಲಿ ಹಮ್ಮಿ ಕೊಳ್ಳಲಾಗಿದೆ. ಶಿಬಿರದಲ್ಲಿ ಕೋವಿಡ್-19 ನಿಯಮದ ಪ್ರಕಾರ ಸ್ಯಾನಿಟೈಶನ್, ಮಾಸ್ಕ್ ಧರಿಸುವಿಕೆ ಮತ್ತು ಅಗತ್ಯ ಸುರಕ್ಷಿತ ಅಂತರದ ನಿಬಂಧನೆಗಳನ್ನು ಚಾಚೂ ತಪ್ಪದೇ ಪಾಲಿಸಲಾಗುವುದು. ಈ ರಕ್ತದಾನ ಶಿಬಿರವನ್ನು ಮಣಿಪಾಲ ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್. ಎಸ್. ಬಲ್ಲಾಳ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಈ ಶಿಬಿರದಲ್ಲಿ ರಕ್ತದಾನ ಮಾಡಲು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕೋವಿಡ್-19 ಸ್ವಯಂಸೇವಕರು, ಯುವ ದಾನಿಗಳು ಮತ್ತು ಇತರ ಸಂಘ ಸಂಸ್ಥೆಗಳ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸುವಂತೆ ಉಡುಪಿ ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.





