‘ರಮಝಾನ್ ನಲ್ಲಿ ಜವಾಬ್ದಾರಿಯುತ ಮುಸ್ಲಿಮರಾಗಿ, ಬಡವರಿಗೆ ಸಹಾಯ ಮಾಡಿ’
ಮುಸ್ಲಿಂ ಯುವಕರಿಂದ #BeAResponsibleMuslim ಹ್ಯಾಶ್ ಟ್ಯಾಗ್ ಅಭಿಯಾನ

ಜಗತ್ತಿನಾದ್ಯಂತ ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ಹಿಂದೆಂದೂ ಕಂಡಿರದ ಬಿಕ್ಕಟ್ಟನ್ನು ಜಗತ್ತು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವೆಡೆ ಲಾಕ್ ಡೌನ್ ಘೋಷಿಸಲಾಗಿದ್ದು, ಜನರು ಮನೆಗಳಿಂದ ಹೊರಗೆ ಬರುವುದನ್ನು, ಗುಂಪು ಸೇರುವುದನ್ನು , ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲೇ ಮುಸ್ಲಿಮರ ಪವಿತ್ರ ತಿಂಗಳಾದ ರಮಝಾನ್ ಕೂಡ ಹತ್ತಿರವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಮರು ಜವಾಬ್ದಾರಿಯಿಂದ ವರ್ತಿಸಿ, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಎಂದು ಕರೆ ನೀಡುವ #BeAResponsibleMuslim ಹ್ಯಾಶ್ ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ. ಹಾಗಾಗಿ ಈ ಬಾರಿಯ ರಮಝಾನ್ ತಿಂಗಳಲ್ಲಿ ಮುಸ್ಲಿಮರು ಸಾಮಾನ್ಯವಾಗಿ ರಮಝಾನ್ ತಿಂಗಳಿನಲ್ಲಿ ಅನುಸರಿಸುತ್ತಿದ್ದ ಕೆಲವು ಸಂಪ್ರದಾಯಗಳಿಗೆ ಕಡಿವಾಣ ಹಾಕಬೇಕು ಎನ್ನುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಗ್ರಾಫಿಕ್ ಡಿಸೈನ್ ಗಳ ಮೂಲಕ ದಿಲ್ಲಿಯ ‘ಮಿನಿಮಲ್ ಮುಸ್ಲಿಂ’ ಎನ್ನುವ ಯುವಕರ ತಂಡ ನಡೆಸುತ್ತಿದೆ.
ಇಫ್ತಾರ್ ಕೂಟಗಳನ್ನು ನಡೆಸಬೇಡಿ: “ನೀವು ಇಫ್ತಾರ್ ಕೂಟಗಳನ್ನು ಮಿಸ್ ಮಾಡಿಕೊಳ್ಳುತ್ತೀರಿ ಎಂದು ನಮಗೆ ತಿಳಿದಿದೆ. ಆದರೆ ನಾವು ಕೊರೋನ ವೈರಸ್ ನ್ನು ತಡೆಯಲೇಬೇಕು. ಇಫ್ತಾರ್ ಕೂಟಗಳನ್ನು ನಿಮ್ಮ ಕುಟುಂಬದ ಜೊತೆ ನಡೆಸಿ” ಎಂದು ಬರೆಯಲಾಗಿದೆ.

ತರಾವೀಹ್ ಜಮಾಅತ್ ನಡೆಸಬೇಡಿ: ನಿಮ್ಮ ಬೇಸ್ ಮೆಂಟ್ ಗಳು, ಪಾರ್ಕಿಂಗ್ ಅಥವಾ ಟೆರೇಸ್ ಗಳಲ್ಲೂ ತರಾವೀಹ್ ಜಮಾಅತ್ ನಡೆಸಬೇಡಿ. ಕೇವಲ ಕುಟುಂಬದವರು ಅಥವಾ ಮನೆಯಲ್ಲಿದ್ದವರ ಜೊತೆ ಜಮಾಅತ್ ನಡೆಸಿ.

ಝಕಾತ್ ಅಥವಾ ದಾನ.. ಡಿಜಿಟಲ್ ರೂಪದಲ್ಲಿ: ನಗದು ವ್ಯವಹಾರ ಕಡಿಮೆಗೊಳಿಸಿ, ಮದ್ರಸಗಳು, ನಿಮ್ಮ ಬಡ ಕುಟುಂಬಸ್ಥರು, ನೆರೆಹೊರೆಯವರು, ಗೆಳೆಯರು, ಅನಾಥರು, ಎನ್ ಜಿಒಗಳು ಹೀಗೆ ಎಲ್ಲರಿಗೂ ಡಿಜಿಟಲ್ ವ್ಯವಹಾರದ ಮೂಲಕ ಸಹಾಯ ಮಾಡಿ. ಸುರಕ್ಷಿತ ಅಂತರ ಕಾಪಾಡಿಕೊಂಡು ಅಗತ್ಯವಿದ್ದವರಿಗೆ ಪಡಿತರ ವಿತರಿಸಿ.

ಈದ್ ಶಾಪಿಂಗ್: ನಿಮ್ಮ ಆಸೆಗಳ ಬಗ್ಗೆ ನಮಗೆ ತಿಳಿದಿದೆ. ಆದರೆ ಮಾನವೀಯತೆಯನ್ನು ಕಾಪಾಡಲು ನಾವು ಸಣ್ಣ ತ್ಯಾಗ ನಡೆಸಲೇಬೇಕು. ನಿಮ್ಮಲ್ಲಿರುವ ಉತ್ತಮ ವಸ್ತ್ರವನ್ನೇ ಈದ್ ಗೆ ಧರಿಸಿ.








