ನಗರಸಭೆಯ ಶೇ.15ರಷ್ಟು ತೆರಿಗೆ ಹೆಚ್ಚಳ ಸಮಂಜಸವಲ್ಲ: ಕಾಂಗ್ರೆಸ್
ಉಡುಪಿ, ಎ.21: ಉಡುಪಿ ನಗರಸಭೆಯು 2020-21ನೇ ಸಾಲಿನ ತೆರಿಗೆ ಯನ್ನು ಪರಿಸ್ಕೃತಗೊಳಿಸಿ ಶೇ.15ರಷ್ಟು ತೆರಿಗೆ ಏರಿಕೆ ಮಾಡಿರುವುದನ್ನು ಉುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಟೀಕಿಸಿದೆ.
ಪ್ರತಿ ಮೂರು ವರ್ಷಗಳಿಗೊಮ್ಮೆ ನಗರಸಭೆ ತೆರಿಗೆಯನ್ನು ಪರಿಸ್ಕೃತ ಗೊಳಿಸು ತ್ತದೆ. ಅದರಂತೆ ಈ ಬಾರಿ ಶೇ.15ರಷ್ಟು ತೆರಿಗೆ ಹೆಚ್ಚಳ ಮಾಡಿದ್ದೇವೆ ಎಂಬ ಹೇಳಿಕೆ ನಗರಸಭೆ ಅಧಿಕಾರಿಗಳಿಂದ ಬಂದರೂ, ಜನತೆ ಎದುರಿಸುತ್ತಿರುವ ಆರ್ಥಿಕ ಸಂಕಷ್ಟದ ಸಮಯದಲ್ಲಿ ಇದು ಸಮಂಜಸವಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಕೊರೋನ ಮಹಾಮಾರಿ ವೈರಸ್ ಬಾಧಿಸುವ ಮೊದಲೇ ದೇಶವು ಆರ್ಥಿಕ ಸಂಕಷ್ಟದಲ್ಲಿತ್ತು. ಸಣ್ಣ ಕೈಗಾರಿಕೆ ಉದ್ದಿಮೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದವು. ಅದರ ಬೆನ್ನಿಗೆ ಸರಕಾರದ ಆದೇಶದಂತೆ ಕೊರೋನಾ ವೈರಸ್ ಲಾಕ್‌ಡೌನ್ ನಿಂದಾಗಿ ನಗರದ ವಾಣಿಜ್ಯೋದ್ಯಮಿಗಳು ಹಾಗೂ ಕಟ್ಟಡ ಮಾಲಕರು ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳ ಲಾಕ್‌ಡೌನ್‌ನಿಂದಾಗಿ ವ್ಯವಹಾರವೇ ನಿಂತ ನೀರಾಗಿರುವಾಗ ಲಾಕ್‌ಡೌನ್ ತೆರವಾದರೂ ವ್ಯವಹಾರ ಮತ್ತೆ ಚಿಗುರಲು ಹಲವು ತಿಂಗಳುಗಳೇ ಬೇಕಾಗಬಹುದು. ಇಂಥ ಸಂದಿಗ್ಧ ಸಮಯದಲ್ಲಿ ನಗರಸಭೆಯು 2020-21ನೇ ಸಾಲಿಗೆ ತೆರಿಗೆಯನ್ನು ಶೇ.15ರಷ್ಟು ಹೆಚ್ಚಳಗೊಳಿಸಿರುವುದು ಮಾನವೀಯತೆಯ ನೆಲೆಯಲ್ಲಿ ಸಮರ್ಥನೀಯವಲ್ಲ. ಆದುದರಿಂದ ಒಂದು ವರ್ಷದ ಮಟ್ಟಿಗಾದರೂ ಶೇ.15 ಹೆಚ್ಚಳವನ್ನು ತಡೆಹಿಡಿಯಬೇಕು. ಹಾಗೆಯೇ ಈ ಹಿಂದಿನ ಅವಧಿಗಳಲ್ಲಿ ಎಪ್ರಿಲ್ ತಿಂಗಳ ಕೊನೆಯೊಳಗೆ ತೆರಿಗೆ ಪಾವತಿ ಸುವವರಿಗೆ ಶೇ.5ರಷ್ಟು ರಿಯಾಯಿತಿ ನೀಡುತಿದ್ದುದನ್ನು ಈ ಬಾರಿ ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜೂನ್ ಅಂತ್ಯದವರೆಗೂ ವಿಸ್ತರಿಸುವಂ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಭಾಸ್ಕರ ರಾವ್ ಕಿದಿಯೂರು ಆಗ್ರಹಿಸಿದ್ದಾರೆ.







