ಕುಂದಾಪುರ: ವಾಹನ ದಟ್ಟನೆ ತಡೆಯಲು ಸಂಚಾರ ವ್ಯವಸ್ಥೆಯಲ್ಲಿ ಬಿಗಿ ಕ್ರಮ

ಕುಂದಾಪುರ, ಎ.21: ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಹನಗಳ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕುಂದಾಪುರ ಪೊಲೀಸರು ಇಂದು ಬೆಳಗ್ಗೆಯಿಂದ ನಗರದಲ್ಲಿ ಹೊಸ ಕ್ರಮದ ಮೂಲಕ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.
ಜಿಲ್ಲಾಡಳಿತವು ಸಾರ್ವಜನಿಕರಿಗೆ ಅಗತ್ಯವಸ್ತುಗಳ ಖರೀದಿಗಾಗಿ ನಿಗದಿ ಪಡಿಸಿದ ಅವಧಿಯಲ್ಲಿ ಕುಂದಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿ ರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಪೊಲೀಸರು ಈ ಹೊಸಕ್ರಮವನ್ನು ಅನುಷ್ಟಾನಕ್ಕೆ ತಂದಿದ್ದಾರೆ.
ಅದರಂತೆ ಕುಂದಾಪುರ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾದ ಚಿಕ್ಕನ್‌ಸಾಲ್, ಚರ್ಚ್ ರಸ್ತೆ ಹಾಗೂ ಶಾಸ್ತ್ರೀ ವೃತ್ತವನ್ನು ಹೊರತುಪಡಿಸಿ ಉಳಿದೆಲ್ಲಾ ಒಳ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಸೋಮವಾರ ರಾತ್ರಿಯಿಂದಲೇ ಬಂದ್ ಮಾಡಲಾಯಿತು.
ನಗರಕ್ಕೆ ಸಂಪರ್ಕ ಕಲ್ಪಿಸುವ ಈ ಮೂರು ಪ್ರಮುಖ ರಸ್ತೆಗಳಲ್ಲಿ ಚೆಕ್ ಪಾಯಿಂಟ್ ಸ್ಥಾಪಿಸಲಾಗಿದ್ದು, ಈ ಮೂಲಕ ನಗರ ಪ್ರವೇಶಿಸುವ ಪ್ರತಿ ಯೊಂದು ವಾಹನಗಳನ್ನು ಪೊಲೀಸರು ಇಂದು ಬೆಳಗ್ಗೆಯಿಂದ ತಪಾಸಣೆ ನಡೆಸುತ್ತಿದ್ದಾರೆ. ಅದಕ್ಕಾಗಿ ಈ ಮೂರು ಪಾಯಿಂಟ್‌ಗಳಲ್ಲಿ ಪೊಲೀಸ್ ಸಿಬ್ಬಂದಿಳನ್ನು ನಿಯೋಜಿಸಲಾಗಿದೆ.
ಎಟಿಎಂ, ಮೆಡಿಕಲ್ ಹಾಗೂ ದಿನಸಿ ವಸ್ತುಗಳ ಖರೀದಿಗೆ ಒಂದಕ್ಕಿಂತ ಹೆಚ್ಚು ಮಂದಿ ಬಂದವರನ್ನು ತಡೆದ ಪೊಲೀಸರು, ಅವರನ್ನು ಅಲ್ಲಿಂದಲೇ ವಾಪಾಸ್ ಕಳುಹಿಸಿದರು. ಅದೇ ರೀತಿ ಜಿಲ್ಲಾಡಳಿತ ನಿಗದಿಪಡಿಸಿರುವ ಅವಧಿ ಯಲ್ಲಿ ದಿನಸಿ ಹಾಗೂ ತರಕಾರಿ ಖರೀದಿಗಾಗಿ ಬಂದವರನ್ನು ಕೂಡ ಪೊಲೀಸರು ತಡೆದಿರುವುದು ಕಂಡು ಬಂದಿದೆ. ಆಸ್ಪತ್ರೆಗಳಿಗೂ ಒಂದಕ್ಕಿಂತ ಹೆಚ್ಚು ಮಂದಿಯನ್ನು ಹೋಗಲು ಪೊಲೀಸರು ಅಕಾಶ ನೀಡಲಿಲ್ಲ ಎಂದು ತಿಳಿದುಬಂದಿದೆ.
ವಾಹನಗಳ ತಪಾಸಣೆಯಿಂದ ಶಾಸ್ತ್ರೀವೃತ್ತದಲ್ಲಿ ಬೆಳಗ್ಗೆ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸಿದರು. ಕೇವಲ ಒಂದು ರಸ್ತೆಯಲ್ಲಿ ಮಾತ್ರ ಪ್ರವೇಶ ಕಲ್ಪಿಸಿರುವುದರಿಂದ ಈ ಸಮಸ್ಯೆ ಎದುರಾಯಿತು. ಬಳಿಕ ಕುಂದಾಪುರ ಠಾಣಾಧಿಕಾರಿ ಹರೀಶ್ ನಾಯ್ಕೆ ನೇತೃತ್ವದ ತಪಾಸಣೆ ಯನ್ನು ಚುರುಕುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಪೊಲೀಸರ ಈ ಏಕಾಏಕಿ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ ನಿಗದಿಪಡಿಸಿದ ಅವಧಿಯಲ್ಲಿ ಕುಂದಾಪುರ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ದೂರಿನ ಹಿನ್ನೆಲೆಯಲ್ಲಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಕೆಲವು ದಿನಗಳ ಕಾಲ ಈ ವ್ಯವಸ್ಥೆಯನ್ನು ಮುಂದುವರೆಸಿ, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದಾದರೆ, ಪೊಲೀಸ್ ಅಧಿಕಾರಿ ಗಳ ಅಭಿಪ್ರಾಯ ಪಡೆದುಕೊಂಡ ಬದಲಾವಣೆಯನ್ನು ಮಾಡಲಾಗುವುದು.
-ಹರಿರಾಮ್ ಶಂಕರ್, ಸಹಾಯಕ ಪೊಲೀಸ್ ಅಧೀಕ್ಷಕ, ಕುಂದಾಪುರ








