ಬೈಂದೂರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಬೈಂದೂರು, ಎ.21: ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೈಂದೂರು ತಾಲೂಕು ಘಟಕ, ಜೇಸಿಐ ಬೈಂದೂರು ಸಿಟಿ, ಜೇಸಿಐ ಉಪ್ಪುಂದ, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮೈ ಬೈಂದೂರು ಡಾಟ್ ಕಾಮ್, ರಕ್ತನಿಧಿ ಕೇಂದ್ರ ಕುಂದಾಪುರ, ತಾಲೂಕು ಆರೋಗ್ಯ ಕೇಂದ್ರದ ಸಹಯೋಗ ದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಂಗಳವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.
ಬೈಂದೂರು ಪೊಲೀಸ್ ಠಾಣಾಧಿಕಾರಿ ಸಂಗೀತಾ ರಕ್ತ ನೀಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು. ಕೊರೋನಾ ಭೀತಿಯಿಂದ ಉಡುಪಿ ಜಿಲ್ಲೆಯಲ್ಲಿ ರಕ್ತ ಸಂಗ್ರಹಣೆ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಇಂತಹ ಸಂದರ್ಭ ದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದೆ. ರಕ್ತದಾನ ನೂರಾರು ಮಂದಿಯ ಪ್ರಾಣವನ್ನು ಉಳಿಸಲು ನೆರವಾಗಲಿದೆ ಎಂದರು.
ರೆಡ್ ಕ್ರಾಸ್ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಹಾಗೂ ಬೈಂದೂರು ತಹಶೀಲ್ದಾರ ಬಸಪ್ಪಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೈಂದೂರು ರೆಡ್ಕ್ರಾಸ್ ಸೊಸೈಟಿಯ ಸಭಾಪತಿ ನಿತೀನ್ ಕುಮಾರ್ ಶೆಟ್ಟಿ, ಸೊಸೈಟಿಯ ಖಂಜಾಚಿ ಸಂತೋಷ್ ಶೆಟ್ಟಿ, ಜೇಸಿಐ ಅಧ್ಯಕ್ಷೆ ಪ್ರಿಯದರ್ಶಿನಿ ಬೆಸ್ಕೂರು, ಜೇಸಿಐ ಶಿರೂರು ಪೂರ್ವಾಧ್ಯಕ್ಷ ಪಾಂಡುರಂಗ ಅಳ್ವೆಗದ್ದೆ, ಉಪ್ಪುಂದ ತಾಪಂ ಸದಸ್ಯ ಜಗದೀಶ್ ದೇವಾಡಿಗ, ಜೇಸಿಐ ಉಪ್ಪುಂದದ ಅಧ್ಯಕ್ಷ ದೇವರಾಯ ದೇವಾಡಿಗ, ಬೈಂದೂರು ವಲಯ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕರ್ನಾಟಕ ಬ್ಲಡ್ ಬ್ಯಾಂಕಿನ ಅಧ್ಯಕ್ಷ ಫೈಯಾಝ್ ಆಲಿ ಯೋಜನಾನಗರ, ಮೈಬೈಂದೂರು ಡಾಟ್ ಕಾಮ್ ವರದಿಗಾರ ಎಚ್.ಸುಶಾಂತ್ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ 120ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು.







